ಈಗೀಗ ಜಗತ್ತಿನಲ್ಲಿ
ಎರಡೇ ಎರಡು ತರಹದ
ಜನರು ಕಾಣುತ್ತಿದ್ದಾರೆ ಗಾಲಿಬ್
ಒಬ್ಬರು ಸುಖ ಪಡುವವರು
ಇನ್ನೊಬ್ಬರು ಸುಖವಾಗಿಡುವವರು-
ಕಣ್ಣ ಬುಟ್ಟಿಯ ತುಂಬಾ
ಭಾವಾನುಭವದ
ಬಣ್ಣ ಬಣ್ಣದ ಹೂಗಳು
ಇಷ್ಟೇ ಸಾಕಲ್ಲವೇನು...
ಬದುಕ ದಾರಿಯಲ್ಲಿ
ಪ್ರೀತಿಯಿಂದ
ಪ್ರೀತಿಯನ್ನು
ಕಾಯ್ದುಕೊಳ್ಳಲು-
ಮಾತು ಸೋತ ಹೊತ್ತಿನಲ್ಲಿ
ಮೌನ ಕಾಡೋ ತೀರದಲ್ಲಿ
ಜಾರಿ ಹೋದ ಬದುಕಿನಿಂದ
ಕಪ್ಪು ಬಿಳುಪು ನೆನಪ ಹುಡುಕಿ
ತುಸು ಬಣ್ಣ ಬಳಿಯ ಬೇಕಿದೆ
ಕವಿತೆಯೊಂದು ಬೇಕಿದೆ
ಹೃದಯ ಭಾವವೊಂದ ಬೇಡಿದೆ-
ಅವಳು ಕೇಳಿದಳು
ನಾ ನೆನಪಾಗ್ತಿನಾ ಅಂತ
ನಡು ರಾತ್ರಿಯಲ್ಲಿ
ನಿನ್ನ ನೆನಪಿಗೊಂದರಂತೆ
ಎದೆ ತುಂಬಾ ಸಾಲು
ದೀಪಗಳ ಹಚ್ಚಿದ್ರೆ
ಆಕಾಶದ ತುಂಬಾ
ಹರಡಿರೋ ನಕ್ಷತ್ರಗಳೇ
ತುಸು ಕಮ್ಮಿಯಿದೆಯೇನೋ
ಅನಿಸುತ್ತೆ ಅಷ್ಟೇ ಅಂದೇ
ಅವಳು ನಕ್ಕಳು....ಚಂದ್ರ ನಾಚಿದ-
ಅಂತರಾತ್ಮದೆದುರು ನಿಂತು
ನಾನು ಹೇಳುವುದೆಲ್ಲ ಸತ್ಯ
ಸತ್ಯವನ್ನಲ್ಲದೇ ಬೇರೇನೂ
ಹೇಳುವುದಿಲ್ಲವೆನ್ನುವ
ಸ್ಥೈರ್ಯವೊಂದಿದ್ದರೆ
ಬದುಕೊಂದೆ ಅಲ್ಲ
ಸಾವು ಸಹ ಬಲು ಸುಖ-
ನಾ ನೆನಪಾಗಲಿಲ್ಲವೇ ಎಂದು
ಕೇಳದಿರು ಗೆಳೆಯ..
ಯಾರಿಲ್ಲದ ಏಕಾಂತದಲ್ಲಿ
ಕಾಡುವವನು ನೀನು
ನಿನ್ನ ನೆನಪ ಕಡಲಲ್ಲಿ
ಮುಳುಗುತಿರುವ ಅಸಹಾಯಕಿ ನಾನು
ಜೊತೆಯ ಬಯಸಿದ್ದೆ ನಿನ್ನ
ನೀ ಕೇವಲ ನೆನಪಲ್ಲೆ ಉಳಿದೋದೆ ನನ್ನ
ಕ್ಷಮಿಸಲಾರೆಯಾ ಗೆಳೆಯ, ಈ ಗೆಳತಿಯನ್ನ
ತಿರುಗಿ ನೋಡದೆಯು ನಾ ತೊರೆದೆ ನಿನ್ನ
ಕೊನೆಗೆ ಬಯಸುವುದಿಷ್ಟೇ
ಹೀಗೆಯೇ ಉಳಿದು ಹೋಗಲಿ
ಹೆಸರಿಲ್ಲದ ಬಂಧವೊಂದು
ಮನದ ಮೂಲೆಯಲ್ಲಿ ನನ್ನ ನಿನ್ನ-
ಜೀವನದಲ್ಲಿ ಅಂದುಕೊಂಡಿದ್ದೆಲ್ಲ
ಸಿಗಬಾರ್ದು ಹುಡುಗಿ
ಜೀವನ ನೀರಸ ಅನಿಸಿಬಿಡುತ್ತೆ,
ಸಿಹಿಯಾದ ನೋವೊಂದು
ಎದೆಯ ಮೂಲೆಯಲ್ಲಿ
ಉಳಿದು ಹೋಗಿಬಿಡಬೇಕು
ಥೇಟ್ ನೀ ನನ್ನ ಎದೆಯಲ್ಲಿ
ಮಲ್ಲಿಗೆಯ ಘಮವ ಚೆಲ್ಲಿ
ತಿರುಗಿ ನೋಡದೆಯು
ತೊರೆದುಹೋದ ಹಾಗೆ...-
ಸುಂದರ ಬೆಳದಿಂಗಳು,ಹೆಗಲಿಗಾತು ಆಕಾಶದತ್ತ ನೋಡ್ತಾ ಮೈ ಮರೆತು ಕುಳಿತ ಅವಳು ಒಮ್ಮೆಗೆ ಏನೋ ನೆನಪಾದಂತೆ ಏಯ್ ಇಲ್ಕೇಳು ಒಂದು ಪ್ರಶ್ನೆ ಕೇಳ್ತೀನಿ ನನ್ನ ಮನಸ್ಸಿಗೆ ಸಮಾಧಾನ ಕೊಡೋ ಉತ್ತರ ಕೊಡ್ಬೇಕು. ಈಗೆಂತಾ ಪ್ರಶ್ನೆಯಪ್ಪ ಇವಳದ್ದು ಅಂತ ತಲೆ ಕೆರೆದುಕೊಂಡೆ. ಅವಳೇ ಮುಂದುವರೆಸಿದಳು ನಿನ್ನ ಉತ್ತರದಿಂದ ಖುಷಿಯಾದ್ರೆ ಈ ಬೆಳದಿಂಗಳ ರಾತ್ರಿಲಿ ಆ ಚಂದ್ರನ ಸಮ್ಮುಖದಲ್ಲಿ ನನ್ನ ಈ ಚಂದ್ರನ ಎರಡು ಕೆನ್ನೆಗೆ ನನ್ನ ತುಟಿಯಿಂದ ಸನ್ಮಾನ ಅಂತಾ ನಕ್ಕಳು.ಉಫ್... ಬೆಳದಿಂಗಳ ಇನ್ನಿಷ್ಟು ಚಂದವಾಗಿಸಿಬಿಟ್ಟ ಅವಳ ಆ ನಗು, ಆ ಗುಳಿ ಕೆನ್ನೆ ನೋಡ್ತಾ, ನಾ ಬಿದ್ದಿದ್ದು ಇಲ್ಲಿಯೇ ಅಲ್ವಾ ಅಂದುಕೊಳ್ತಾ ಏನೇ ನಿಂದು ಈ ಹೊತ್ತಲ್ಲಿ ಪ್ರಶ್ನೆ ಅನ್ನಬೇಕೆನ್ನುವಷ್ಟರಲ್ಲಿಯೇ,ತಟ್ಟನೇ ಪ್ರಶ್ನೆ ಎಸೆದಾಗಿತ್ತು. ನೋಡಲ್ಲಿ ಆ ಚಂದ್ರನ ಕಂಡರೆ ನಿಂಗೆ ಏನು ಅನಿಸುತ್ತೇ ? ಯಾಕೆ ಎಲ್ಲಾ ಪ್ರೇಮಿಗಳು, ಕವಿಗಳು ಹಾಗೇ ನೀನು ಕೂಡ ಚಂದ್ರನ ಬಗ್ಗೆಯೇ ಬರೀತೀರಾ..? ಈ ಹೆಣ್ಣಮಕ್ಕಳಿಗೆ ಯಾವಾಗ ಏನು ಪ್ರಶ್ನೆ ಕಾಡುತ್ತೋ ಭಗವಂತ ಅಂತ ಮತ್ತೇ ತಲೆ ಕೆರೆದುಕೊಂಡೇ,ತಟ್ಟನೆ ಏನೋ ತಲೆಗೆ ಹೊಳೆಯಿತು.ಆ ಚಂದ್ರನದು ಒಂದು ಲವ್ ಸ್ಟೋರಿ ಇದೆ ಹೇಳ್ತೀನಿ ಕೇಳು, ಆದ್ರೆ ಒಂದು ಕಂಡೀಷನ್ ಮದ್ಯೆ ಪ್ರಶ್ನೆ ಕೇಳಬಾರ್ದು ಓಕೆನಾ....ಹೂ ಹೇಳು ಬೇಗಾ ಅಂದಳು. ನೋಡಲ್ಲಿ ಚಂದಿರ ದಿನಾ ಬೆಳಿಗ್ಗೆಯಿಂದ ಕತ್ತಲೆಯವರೆಗೂ ಚದುರಿ ದಿಕ್ಕಾಪಾಲಾಗುವ ಬೆಳಕಿನ ಕಣಗಳನ್ನು ತನ್ನದೇ ಜೀವದ ಭಾಗ ಅನ್ನೋ ಹಾಗೆ ಎದೆ ತುಂಬಾ ತುಂಬಿಕೊಂಡು, ರಾತ್ರಿ ಆಗ್ತಾ ಇರೋ ಹಾಗೆ ಆ ಬೆಳಕನ್ನ ಎದೆ ಮೇಲೆ ಹರಡಿ ಬೆಳಕಿನ ಮೊಗವನ್ನ ಬೊಗಸೆಯಲ್ಲಿ ಹಿಡಿದು ಹೇಳ್ತಾ ಇದ್ದಾನೇ....— % &........"ಓ ಬೆಳಕೇ ನೀನಿಲ್ಲದೆ ನಾನು ನಾನೇ ಅಲ್ಲ, ನಿನ್ನಿಂದಲೇ ನನಗೊಂದು ಅಸ್ತಿತ್ವ, ನಿನ್ನಿಂದಲೇ ನಾ ಬೆಳಗಿದ್ದು, ನೀನಿಲ್ಲವೆಂದರೆ ನಾನು ಆಗಸದ ಮೂಲೆಯಲ್ಲಿ ಸುತ್ತುತ್ತಿರುವ ಕಪ್ಪು ಗೋಳವಷ್ಟೇ, ನಿನ್ನಿಂದಲೇ ಈ ಜೀವನ ಚಂದವಾಗಿದ್ದು, ನಾ ಬೆಳಗುವ ಚಂದಿರನಾಗಿದ್ದು. ವ್ಹಾ!!...ಎಂತಾ ಪ್ರೀತಿ,ಇದನ್ನ ಕೇಳಿ ಬೆಳಕಿಗೆ ಸ್ವಲ್ಪ ಜಂಬ ಬಂದಿರ್ಬೇಕು ಅಲ್ವಾ? ಅಂದಳು. ಸುಮ್ನೆ ಕೇಳು ನಿನ್ನ ಹಾಗಲ್ಲ ಆ ಬೆಳಕು, ಮದ್ಯ ಮಾತಾಡ್ಬೇಡ ಹೇಳಿದ್ನಲ್ಲ ಆವಾಗಲೇ, ಮತ್ತೇ ನಕ್ಕಳು. ಕೇಳಿಲ್ಲಿ ಆ ಬೆಳಕು ಚಂದ್ರನ ಮುಖವ ನೇವರಿಸುತ್ತಾ ಹೇಳ್ತಾ ಇದೆ"ನಿನ್ನ ನೋಡುವವರೆಗೂ ನಾನೇ ಬೆಳಕು ಅಂತಾನೇ ನನಗೆ ಅರಿವಿರಲಿಲ್ಲ, ಒಂಟಿಯಾಗಿ ಬಾನಿನ ಉದ್ದಗಲಕ್ಕೂ ಹರಡಿ ದೂರ ದೂರದವರೆಗೆ ಚೆಲ್ಲಾಪಿಲ್ಲಿಯಾಗಿಬಿಡುತ್ತಿದ್ದೆ,ಒಂಟಿಯಾಗಿದ್ದೆ ನನ್ನ ಕಣ ಕಣವನ್ನು ತಬ್ಬಿ ಎದೆಯೊಳಗೆ ಇಟ್ಟು ಪ್ರೀತಿಸಿದ್ದು ನೀನೊಬ್ಬನೇ, ನಾನು ಬೆಳಗಬಲ್ಲೆ, ನಾನು ಬೆಳಕು ಅಂತ ಅರಿವಾಗಿದ್ದೆ ನಿನ್ನಿಂದ, ನೀನಿಲ್ಲದಿದ್ದರೆ ನಾನು ಶೂನ್ಯ, ನಾನೇ ಕತ್ತಲು".
ಆ ಅನನ್ಯ ಪ್ರೇಮದಲ್ಲಿ ಚಂದ್ರ ನಗುತ್ತಿದ್ದರೆ, ಬೆಳಕು ಹೊಳೆಯುತ್ತಿತ್ತು. ಇದೇ ಪ್ರೇಮ,ಇದೇ ಪ್ರೀತಿಯಲ್ಲವೇ, ಬೆಳಕು ಮತ್ತು ಚಂದ್ರನ ನಡುವಿನ ಬಾಂಧವ್ಯ ಅಮರವಾಗಿಸಿದ್ದು. ಚಂದ್ರನಿಲ್ಲದೆ ಬೆಳಕು ಬೆಳಕೇ ಅಲ್ಲ, ಬೆಳಕಿಲ್ಲದೆ ಚಂದ್ರನೇ ಇಲ್ಲ.
ಇಷ್ಟು ಹೇಳಿ ಮುಗಿಸಿದ್ದೇ ತಡ ಕುತ್ತಿಗೆಗೆ ಜೋತು ಬಿದ್ದು ಕೆನ್ನೆಗೆ ಎರಡು ಮುತ್ತನಿಟ್ಟಳು. ಪ್ರೀತಿಯಲ್ಲಿ ಏಳುವುದು ಎನ್ನುವದಕ್ಕೆ ಬೆಳಕು ಹಾಗೂ ಚಂದ್ರನ ನಡುವಿನ ಪ್ರೇಮವೇ ಉದಾಹರಣೆಯಲ್ಲವೇ......— % &-
ಬಡತನದಲ್ಲಿದ್ದಾಗ
ಕಡಿಮೆ ಖರ್ಚಲ್ಲಿ
ಸಿಕ್ಕುವಂತದ್ದು ಖುಷಿಯೊಂದೇ
ಹಣ ಜಾಸ್ತಿಯಾದ ಹಾಗೆ
ದುಬಾರಿಯಾಗುವಂತದ್ದು
ಸಹ ಖುಷಿಯೇ-
ನಿನ್ನಷ್ಟು ಚಂದಕೆ ನಗುವ ಹುಡ್ಗಿನಾ
ನೋಡೇ ಇಲ್ಲ ಅಂದಾಗಲೆಲ್ಲ
ನೀ ನಾಚಿ ತಲೆತಗ್ಗಿಸಿ ಮುಗುಳ್ನಕ್ಕಾಗ
ಹರಡಿ ನಿಂತ ಮುಂಗುರುಳು
ನಿನ್ನ ಕೆನ್ನೆ ಸವರಿ ನನ್ನ ಕೈಬೀಸಿ ಕರೆದಾಗ
ಬಿರಿದ ನನ್ನೆದೆಯ ತುಂಬಾ
ನಿನ್ನನ್ನೇ ಹಾಸು ಹೊದ್ದು
ನಿನ್ನ ತುಟಿಗಳೊಡನೆ ಸರಸವಾಡುವ
ಬಯಕೆಗೇನೆನ್ನಲ್ಲಿ...ಮಲ್ಲಿಗೆ— % &-