ವೈರತ್ವದ ಆಚೆ
ನಾನು ನೀನು, ನಾವು ನೀವು
ಎನ್ನುವುದರಲ್ಲಿ ಕಾಲಹರಣ
ಸಾಧಿಸಿದ್ದೇನು ಗಳಿಸಿದ್ದೇನು?
ಅರಿತು ಬಾಳು ಮೂರುದಿನದಲಿ...
ನೀನು ನೀವು ಕೆಟ್ಟವರು ಅನ್ನುವುದೇ
ನಿನ್ನ ಯೋಚನೆ ನೀಚ ಅಲ್ಲವೇ
ರಾವಣ ಕೆಟ್ಟವನು ಒಳ್ಳೆವನೋ
ಮಾತನಾಡುವ ಚಪಲ ನಮ್ಮದು
ಸವೆಸಿದ ಹಾದಿಯನು ನೋಡುವವರಾರು?
ಒಂದು ತಪ್ಪು! ಕಳೆದದ್ದು ನೂರು
ಶಿವಲಿಂಗ ಪಡೆದ ಅಪ್ಪಟ ಶಿವಭಕ್ತ
ವೈರತ್ವದ ಆಚೆ ಇರುವಿಕೆಗೊಂದು
ಸ್ಥಳಾವಕಾಶ ಕಲ್ಪಿಸಿದ ಮಹಾ ನಡಿಗೆ
ಮರೆಮಾಚಿತು ಕೆಟ್ಟ ಘಳಿಗೆ ಅಲ್ಲವೇ
ಬೇಗೆಯಲಿ ಬೇಯಿದ ಮನಸ್ಸು,
ಎದೆಗವಚಿ ಅಂತರಾಳದಿಂದ ಅರ್ಥೈಸು
ನಿನ್ನ ನಡೆಗೊಂದು ತಿರುವು
ವ್ಯಕ್ತಿತ್ವಕೊಂಡು ಬೆಳಕಿನ ಕಿರಣ
ಜೀವನದಲಿ ಹೊಸತನದ ಚೈತನ್ಯ
ಆಸೆಗೊಂದು ಹಾದಿಯ ಕಾಣು
ಒಂದೊಳ್ಳೆ ಸಿದ್ಧಾಂತ ಒಪ್ಪಿ ಅಪ್ಪಿಕೋ ಓ ಮನವೇ-
ಅಪರಿಚಿತ ರಾತ್ರಿಯ ಭಾವನೆ
ಮನಸಿನ ಕಣ್ಣೊಂದು
ಅಪರಿಚಿತ ರಾತ್ರಿಯ
ಕನಸುಗಳ ಗೂಡಿನಲ್ಲಿ
ಹೊಸತನದ ಉಯ್ಯಾಲೆ ಕಟ್ಟಿದೆ
ಸ್ವರ್ಗದ ಬಾಗಿಲಿನಲ್ಲಿ
ಸರಿಗಮ ಸ್ವರಗಳ ಸಿಂಚನ
ಜೀವಗಂಗೆ ಹಣೆಯ ಮೇಲೆ
ಮೂಡಿ ಮುದ ನೀಡುತ್ತಿದೆ...
ಮನಗಳ ಮಿಲನ ಸುಳಿಯಲಿ
ಚಿಲಿಪಿಲಿ ಹಾಡೊಂದು ಸುಳಿದು
ಸಿಹಿ ಹೃದಯ ಕಂಪನಗೊಂಡು
ಮಧುರವಾದ ರಾತ್ರಿಗೆ ಸಾಕ್ಷಿಯಾಗುತ್ತಿದೆ ..
ಗಾಳಿ ಗಾಳಿ ತಂಪಾದ ತಂಗಾಳಿ
ಮನೋಭಿಲಾಸೆಯ ಚಿತ್ ಕೈಲಾಸ
ಭವದ ಭಾವನೆಗಳೊಂದಿಗಿನ ಬಂಧ
ಒಂದಾಗಿ ರಸ ಕಾವ್ಯವ ಬಿಡಿಸುತ್ತಿದೆ..-
ದೈವ ಕೊಟ್ಟ ಬದುಕು
ಅಳಬೇಡ ಕೊರಗಬೇಡ ನೀನು
ಸಿಕ್ಕುಗಳ ದಾಟಿ ಬಂದಿರುವೆ
ಕೇಳುವವರಿಲ್ಲ ಮನದ ಮಾತು
ಅವರವರ ಜಂಜಡದಲ್ಲಿ
ನಿನಗೇ ನೀನು ಸರಿಸಾಟಿ ಬದುಕಲಿ...
ಹಿಯ್ಯಾಳಿಸಬೇಡ ಬದುಕನ್ನ
ಕೊಟ್ಟಿದ್ದು ಸುಂದರ ಸ್ವೀಕರಿಸು
ದೋಷಿಸಬೇಡ ಬಾಳನ್ನು
ಅವನು ಆಡಿಸುವ ನಾಟಕದಲ್ಲಿ
ಅಂಜದೆ ಅಭಿನಯಿಸು ನೀನು...
ನೀನು ನೀನೆ ಎಲ್ಲದಕ್ಕೂ ಉತ್ತರ
ಮನಸಿನ ಮಾತು ಕೇಳು
ನೈಜ ನಿಜ ದಾರಿಯನು ತೋರುವುದು
ದೈವ ಕೊಟ್ಟ ಬಾಳು
ಭವದ ತುಡಿತದೊಂದಿಗೆ ನಡೆಯಲಿ
ಯಾರು ಇಲ್ಲದೆ ಏಕಾಂತದಲ್ಲಿ....-
ಭವ ಭಾವದ ತುಡಿತ
ಭಾನತ್ತೆರಕ್ಕೆ ಹಾರುವ ಹಂಬಲ
ರೂಪ ರೂಪಾಂತರದಲ್ಲಿ
ಭವದ ಭಾವ ಚಲಿಸಿದರು
ಒಂದೇ ತರಹ ತುಡಿತ ನೋಡು...
ಅನೇಕ ಸವಾಲುಗಳ ದಾಟಿ
ಗರ್ಭಗುಡಿ ಸೀಳಿ ಹೊರ ಬರಲು
ಹೊರ ಬಂದ ಮೇಲೆ
ಭವದ ಹಲವು ಬಗೆ ಸಿಕ್ಕುಗಳು ನೋಡು..
ಮನಸಿನ ನಾನಾ ತರಹ ಅಮಲು
ಆಚೆಯಲಿ ಭರವಸೆಯ ಹೊತ್ತ ರೆಕ್ಕೆಗಳು
ಬೆಳಕಿಗಾಗಿ ಕಾಯುತ ಇಕ್ಕಟ್ಟಿನಲ್ಲಿ ಚಿಗುರಿ
ಅಂಬರಕ್ಕೆ ಹಾರುವ ಹಾತೊರೆಯುವ
ಭವ ಭಾವದ ತುಡಿತ ಒಂದೇ ನೋಡು
ಈ ಬದುಕು ಸುಂದರ, ಕಲಿಯುವ ಕಲಿಸುವ
ಸರಳ ವಿರಳ ಸಾಧನೆಯ ಹಾದಿಯ ಸಿಕ್ಕು
ಅದರಾಚೆ ಅಹಂಕಾರ, ದರ್ಪ ಭಾವ
ಇತಿಹಾಸ ಬಗೆದು ನೋಡಿದರೂ
ಭವ ಭಾವದ ತುಡಿತ ಒಂದೇ ನೋಡು-
ಭರವಸೆ ಬದುಕು...
ಬದುಕಿನ ಅನನ್ಯತೆಯ ಭರವಸೆ
ನಾಳೆಯ ಬಾಳ್ವೆಯಲ್ಲಿ ಚೈತನ್ಯತೆ ತುಂಬಿ
ಹೆಜ್ಜೆಯಲಿ ಹುಮ್ಮಸ್ಸಿನ ಮಂತ್ರ
ಕಂಡರಿಯದಂತೆ ನೋಡು ನಮ್ಮೊಳಗ..
ನೋವು ಕಂಡರೂ ಕಾಣದೇ ಸದಾ ಬೆಳಗುತ್ತಾ
ಮುಂಜಾವಿನಲಿ ಕಿರಣದಿಂದಲೇ ಬಾಳಿಗೆ
ಉಲ್ಲಾಸ ಉತ್ಸಾಹ ಭರಿತ ಭಾವ ತಂದು,
ಏರುಗತಿಯಲ್ಲಿ ಸಾಗಿ ಸುಸ್ತಾಗಿಸಿ
ಮತ್ತೆ ಕನಸ್ಸುಗಳ ಮಡಿಲಿಗೆ ದೂಡುವ
ಅದಮ್ಯವಾದ ಕ್ರಿಯೆಗೆ ಪ್ರತಿಕ್ರಿಯೆ ನೀಡುತ,
ಮುಳುಗಿ ಮತ್ತೆ ಬೆಳಗುವ ಸೂರ್ಯ
ಬಾಳಿಗೆ ಭರವಸೆಯ ಬೆಳಗು ನೋಡು
ಬದುಕು ಬಾಳೆಯ ಗಿಡದ ಗೊನೆಯಲ್ಲ
ಬುಡದಲಿ ಬಿಡುವ ಹಿಂಡು ಸಸಿಯ ಚಿಗುರು
ನಾಳೆಯ ಕನಸ್ಸುಗಳ ಬುತ್ತಿಯಲ್ಲಿ
ಕೊನೆಯಾಗದ ರಸಭರಿತ ಅಮೃತವಿದು
ಅರ್ಥ ಅಪಾರ ಅನನ್ಯ ಚೈತನ್ಯವಿದು
ನೋಡಿ ಬಾಳು ನಾಳೆಯ ಭವದ ಭರವಸೆಯ ಬದುಕಲಿ-
ಜೀವನದ ಪ್ರಶ್ನೆ
ನಾನು ನನ್ನದು ಏನಿದೆ ಏನಿಲ್ಲ
ನೀಡಿದ ಅಮೂಲ್ಯ ಕಾಣಿಕೆ ಇದು
ಕುಣಿಕೆ ಆಗದಿರಲಿ
ಕನಸಿನ ಬದುಕು ಕತ್ತಲಾಗದಿರಲಿ
ನನ್ನ ನೆರಳು ನನಗೆ ಎದುರಾಳಿ
ಕಾಲಚಕ್ರದ ಬೆಳಕಿನಲ್ಲಿ
ಆಗಿದ್ದರೆ ಎನ್ನವರಾರು ಇಲ್ಲಿ
ಸ್ವಾರ್ಥದ ಅಮಲು ಜಾಸ್ತಿ ಇರುವಾಗ
ನನ್ನದು ಎಂಬುದು ಬರೀ ನಂಬಿಕೆ
ಎಲ್ಲದು ಅವನ್ನಲ್ಲಿರುವಾಗ
ನಾವಿಲ್ಲಿ ಅವನಾಡಿಸುವ ಗೊಂಬೆ
ಇರುವವರಿಗೆ ಭಾವಗಳ ಭಾವನೆ ಚೆಲ್ಲಾಟವೇ ಮೇಲು..
ಬದುಕಿನ ಅರ್ಥ ಹುಡುಕುತ ಹೋರಾಟ ಮನಸ್ಸು
ಪ್ರಶ್ನೆಗಳ ಸುರಿಮಳೆಯ ಮೇಲಾಟದಲಿ
ಉತ್ತರ ಸಿಗುವುದು ಕಷ್ಟ, ಮೇಲೊಂದು ಪ್ರಶ್ನೆ
ಯಾರಿಗೂ ಯಾರು ನಿನಗೆ ನೀನೇ ಇಲ್ಲಿ ಕೇಳು ಮನವೇ..-
ಮನಸಿನ ಭಾವದೊಳಗಿನ ರತಿ ಮೊಗದವಳೇ
ಭಾವಲೋಕವ ಆಳುವ ಮನದರಸಿಯೇ
ಹಣೆಬರಹ ಬದಲಾಯಿಸುವ ಬ್ರಹ್ಮ ಕಮಲದವಳೇ
ನಿನ್ನ ಸಾನಿಧ್ಯ ಬಯಸುತ್ತಿದೆ ಈ ಹೃದಯ ಅರಮನೆ..
ನಾನು ಎಂಬ ಭ್ರಮೆಯ ಈ ಜೀವನದಲ್ಲಿ
ನಿನ್ನ ಆಗಮನದ ಹಜ್ಜೆಯ ಘಳಿಗೆಯಲ್ಲಿ
ಕಂಡ ಕನಸಿನ ನಾಳೆಯ ನಿರೀಕ್ಷೆಯಲ್ಲಿ
ಸಾನಿಧ್ಯ ಬಯಸುತ್ತಿದೆ ನಿನ್ನಯ ಸುಂದರ ಸಾಮೀಪ್ಯ...
ಹೃದಯ ಅರಮನೆ ಆವರಣದ ಜ್ಯೋತಿ
ನಮ್ಮಿಬ್ಬರ ನಡುವಿನ ಸುಂದರ ಮೌನ ಮಿತಿ
ಹಂಚಿಕೊಳ್ಳುವ ನಡೆಯ ಸ್ಪಂದನದ ಗತಿ
ಬಯಸುತ್ತಿದೆ ಈ ಜೀವನದಲಿ ಮಿಂಚುವ ಮೂಗುತಿ....
ಮುಳ್ಳಿನ ಮಧ್ಯ ನಲಿಯುವ ನಗುವಿನ ಗುಲಾಬಿಯೇ
ಸಮಯ ನೀಡಿ ರಚಿಸಿ ಬ್ರಹ್ಮನೆ ನಾಚುವ ಚಲುವೆಯೇ
ಇಂಪಾದ ಸೊಂಪಾದ ಕನ್ನೋಟದ ಗಮನದ ಗಮಕವೇ
ನೀನು ಎನ್ನುವುದರಲ್ಲಿ ಎರಡನೇ ಮಾತಿಲ್ಲ ಕೇಳು ಮನವೇ .-
ಮಲಗಬೇಕು ಇಂದು ನಾನು
ನಾಳೆಯ ಬದುಕಿಗಾಗಿ
ಕನಸು ನನಸಾಗಿಸಲು
ಭರವಸೆಯ ಬೆಳಕಿಗಾಗಿ..
ನನ್ನ ಭಾವನೆ ಬಿತ್ತಲು
ಬಿತ್ತಿದ ಬೀಜ ಮೊಳಕೆ ನೋಡಲು
ಫಲವ ಹೇಗಿರುತ್ತಿದೆ ಎಂದು..
ಆಸೆಯ ಆಚೆಯ ಘನಿಭವಿಸಿದ
ಹಣೆಯ ಮೇಲಿನ ಬೆವರಿನ ಬಿಂದು
ರೂಪಾಂತರದ ರೂಪಕ್ಕಾಗಿ...
ಸತ್ಯ ಮಿಥ್ಯದ ಕುರುಹು ಕಾಣಲು
ಅಂತರಂಗದ ಅಳಲು ಅಲೆಯನ್ನ
ಎತ್ತ ಸಾಗುವುದು ಎಂಬ ಅರಿವಿಗಾಗಿ
ಮಲಗಬೇಕು ಇಂದು ನಾನು ನಾಳೆಗಾಗಿ...-
ನಮ್ಮಿಬ್ಬರಿಗೂ ದೂರದ ಕನಸ್ಸು
ನಡೆದಾಯಿತು ಹಲವು ಹೆಜ್ಜೆ
ಪ್ರೀತಿ ಪ್ರೇಮ ಒಲವೆಂಬ ಲತೆಯಲ್ಲಿ
ಸುಮವೂ ಹದವಾಗಿ ಹರಡುತ್ತಿದೆ..
ಕನಸುಗಳ ಬೆನ್ನೇರಿದ ಪಯಣದಲಿ
ಮನದ ಚಿಕ್ಕ ಚಿಕ್ಕ ಆಸೆಯ ಈಡೇರದೇ
ಸರಿ ಇರದ ಭಾವನೆಯ ನದಿಯೊಂದು
ನಡುವೆ ಹರಿದು ದಂಡೆಯ ಮೇಲೆ ಕೂರಿಸಿದೆ..
ನೋವಿನ ಕೂಗು ಕೇಳಿಸದೆ
ಮನವ ಮೆಚ್ಚಿದ ಮನಸಿನ ಮಾತು
ಮಧ್ಯ ಹರಡಿದ ನೀರಿನಲ್ಲಿ ಹರಿದು
ಸಂವಹನ ಕೊಂಡಿ ಕಳಚುತಿದೆ...
ಹಕ್ಕಿಯ ಹಾಡಿಗೆ ತಲೆ ತೂಗಿದ ದಿನ
ಭುಜಕ್ಕೆ ಒರಗಿ ಕೇಳಿದ ಆ ಲಾಲಿ ಹಾಡು
ಮುತ್ತಿನ ಪಲ್ಲಕ್ಕಿ ತಂದ ಮಧುರ ಅನುಭೂತಿ
ಇಲ್ಲದ ಈ ಘಳಿಗೆಯಲ್ಲಿ ನೆನವು ಒಂದೇ ಆಧಾರ...
ಆಧಾರ ಆದರದ ಪ್ರೇಮ ಸ್ವಾಗತ
ಸ್ವಗತ ಲಹರಿ ಸಂಗೀತೋತ್ಸವ ಮನಕೆ
ಏನಿದು ಎರಡಕ್ಷರದ ಜೀವ ಜೀವನದ ಪ್ರೀತಿ
ಜೀವನದಿಯಲ್ಲಿ ಕಣ ಕಣವಾಗಿ ಕರಗುತಿದೆ...-