ಸೋಲು ಮಧ್ಯಂತರವು ಮನಸಿನಾಣತಿಯಂತೆ ಜಗ
ಅಳುಕು ಕೆಡಕುಗಳೆಲ್ಲ ಕುಗ್ಗುವಿಕೆಗೆ
ಫಲ ದೊರೆವುದೊಂದು ದಿನ ಶ್ರಮವು ಅನುದಿನದಿರಲು
ಗೆಲುವಿಗಾತುರ ಸಲ್ಲ -ಪರಿತ್ಯಾಗಿ-
ಇದ್ದಲ್ಲಿ ಸುಖವಿಲ್ಲ ಎತ್ತಲದೋ ಮೋಹಿಸುತ
ಸಾಧಿಸಲು ಬರಿನಾಲ್ಕು ದಿನದ ಸ್ಥಿರತೆ
ಅದು ಸೊಗಸು ಎಂಬುದರ ನಡುವೆ ಅಲೆದಾಟವೆಲ್ಲಾ
ಸಂದುದೇನದು ಕೊನೆಗೆ-ಪರಿತ್ಯಾಗಿ-
ಅರ್ಥ ಜೀವನದ ಸೆಲೆ ಹುಡುಕುತ್ತ ನೀನರಸೆ
ವ್ಯರ್ಥಗೊಳಿಸದಿರತ್ತ ವಾಸ್ತವ್ಯವ
ಸ್ವಾರ್ಥತೆಯೇ ತುಂಬಿಹುದು ಅರ್ಥೈಸೆ ಕೇಳುವರೇ
ಅರ್ಥಕ್ಕೆ ಬೆಲೆಯಿಲ್ಲಿ -ಪರಿತ್ಯಾಗಿ-
ಎಲ್ಲ ಸರಿ ಎಲ್ಲಾ ಸಮವೆಂದಿಲ್ಲ ಜಗದೊಳಗೆ
ಪೊಳ್ಳು ಮಾತಿನ ಒಲುಮೆಗಿರುವ ಸೂಚಕವು
ಹೋಲಿಕೆಗೆ ನಾಲ್ಕೈದು ಭಿನ್ನತೆಯು ಸ್ವಂತಿಕೆಗೆ
ನಾಳೆಗಿಂದಿನ ಬುತ್ತಿ -ಪರಿತ್ಯಾಗಿ
-
ಇಂದು ಬೇಕೊಂದು ಜನ ಮತ್ತೆ ಇನ್ನೆತಲಿಗೋ
ಅಂದ ಮಾತ್ರಕ್ಕೆ ಕುದ್ದು ಕಡಗಣನೆಯೇಕೆ
ಹಂಬಲವು ನಿನದೇಕೆ ಕೆಡಿಸುವಾ ನಡವಳಿಕೆ
ಸಂದದಿರದೆಲ್ಲಾ ಕೊನೆಗೆ -ಪರಿತ್ಯಾಗಿ-
ನಾಳೆ ಘಟಿಸುವ ಅರಿವಿನಾಚೆಯದ ಊಹಿಸುತಾ
ಎಳೆಯಾಗಿ ಎಲ್ಲ ಪರಿಣಾಮಗಳ ಕೆದುಕಿ
ಗಳಿಗೆ ವ್ಯಯಿಸುತ ಚಿತ್ತ ಚಡಪಡಿಸೆ ಫಲವಿಹುದೇ
ಕಳೆವುದಿಂದಿನ ಬದುಕು- ಪರಿತ್ಯಾಗಿ-
ಬೇರಿನಾ ತುದಿಗೆ ನೀರಾಸರೆಯು ದೊರಕುತಿರೇ
ಸೂರ್ಯ ರಶ್ಮಿಯು ಪರ್ಣಕಸುವ ತುಂಬುತಿರೇ
ನೆರವಾಗೆ ಎಲ್ಲ ಮತಿಯುಚಿತಕ್ಕೆ ಸಹಜದಲಿ
ಮರೆತು ಬಿಡು ದೃಢತೆಯನು-ಪರಿತ್ಯಾಗಿ-
ಸೊರಗಿ ಮತ್ತೇನು ಫಲ ಎಸುಗಿರುವ ಕೃತ್ಯಕ್ಕೆ
ಜರುಗಿದಂದಿಗೆ ರದ್ದತಿಗವಕಾಶವಿಲ್ಲ
ಅರೆಗಳಿಗೆ ನಿಂತೆನ್ನ ತಪ್ಪೊಪ್ಪಿ ತಿದ್ದದಿರೆ
ನರಜನ್ಮದವಸಾನ -ಪರಿತ್ಯಾಗಿ-
ಮತ್ತು ಜಗಕೇ ಪ್ರೀತ್ಯ ನಾನೆಂಬ ಭಾವದಲಿ
ಹೊತ್ತು ತರುವುದು ನಿತ್ಯ ಬೇಕೆಂಬುದದನು
ಮಿಥ್ಯವದು ಮೆಟ್ಟಿಹುದು ಗತದ ಮಾಯಾಂತರದಿ
ಮತ್ತಿಹುದೆ ಶಂಕೆಗೆಡೆ -ಪರಿತ್ಯಾಗಿ-
ಆವ ವಿಷಯವದಿರಲಿ ಭಾವ ತನದುನ್ನತಿಯು
ಅವಿತಾರ್ಥ ನೈಜ್ಯತೆಯ ಪರಿವೆ ಮತಿಗಿಲ್ಲ
ತವಕ ವ್ಯಾಖ್ಯಾನತೆಗೆ ಜಿಜ್ಞಾಸೆಗೆಡೆಯಿಲ್ಲ
ದೈವತ್ವಕಾತುರವೇ -ಪರಿತ್ಯಾಗಿ-