ಅಣ್ಣನಾಗಲು ಒಡಹುಟ್ಟಿದವರೇ ಇರಬೇಕೆಂದೇನಿಲ್ಲ
ತಮ್ಮನಾಗಲು ರಕ್ತ ಸಂಬಂಧಿಯಾಗಬೇಕಿಲ್ಲ
ಒಂದೇ ತಾಯಿಯಿಂದ ಜೀವಪಡೆದವರಷ್ಟೇ ಸಹೋದರರರಲ್ಲ
ತಂಗಿ ಎಂದು ನಿನ್ನ ಕಾಯುವವರೆಲ್ಲ ಅಣ್ಣಂದಿರೇ
ಅಕ್ಕ ಎನ್ನುವ ಸ್ವಚ್ಛ ಮನಗಳೆಲ್ಲ ತಮ್ಮಂದಿರೇ
ಅಣ್ಣ-ತಮ್ಮರಿರಲಿ ಬಾಳಿಗೆ!
ಆಗಲೇ ಈ ಹೆಣ್ಣಿನ ಬದುಕಿಗೊಂದು ಏಳಿಗೆ..
-
ಕೈತುತ್ತು ಒಂದೇ ಆದರೂ ರಕ್ತಗತವಾಗುವುದು ಬೇರೆ ಬೇರೆ
ಕಲಿಸಿದ್ದು ಒಂದೇ ಆದರೂ ಕಲಿಯುವುದು ಬೇರೆ ಬೇರೆ
ಒಂದೇ ಗಿಡದ ಹಣ್ಣುಗಳಾದರೂ ಒಂದೊಂದು ರುಚಿ ಬೇರೆ
ಹಸ್ತ ಒಂದೇ ಆದರೂ ಬೆರಳುಗಳ ಅಳತೆ ಬೇರೆ ಬೇರೆ
ಕಾಲುಗಳು ಒಂದೇ ಆದರೂ ನಡೆವ ಆ ಹಾದಿಗಳೇ ಬೇರೆಬೇರೆ
ಒಂದೇ ತಾಯಿಯ ಮಕ್ಕಳಾದರೂ ಒಂದರಂತೊಂದಿರದ ಆ ಸೃಷ್ಟಿಯ ವಿಚಿತ್ರವೇ ಬೇರೆ!
-
ಅರ್ಧ ತುಂಬಿದ ಬೊಗಸೆ ಅರ್ಧ ಖಾಲಿಯಿದ್ದಂತೆ!
ಅರ್ಧ ಖಾಲಿಯಿರುವ ಬೊಗಸೆ ಅರ್ಧ ತುಂಬಿದಂತೆ! ಅಪೂರ್ಣದಲ್ಲಿಯೂ ಪೂರ್ಣವಿದ್ದಂತೆ!
ಅಪೂರ್ಣ ಅಪೂರ್ಣ ಬೆರೆತು ಪರಿಪೂರ್ಣವಾದಂತೆ!
ಪೂರ್ಣತೆಯಲ್ಲಿ ತುಂಬಿತುಳುಕಿಬೀಳುವಾಗ ಅಪೂರ್ಣವೋ?
ಖಾಲಿಯಿರುವುದ ಮರೆತು ಖಾಲಿಯಾದರೆ ಸಂಪೂರ್ಣವೋ?-
ಒಳಗೊಳಗಿನ ಭಾವನೆಗಳೊಳಗಿನ ನೈಜ ಬಣ್ಣವನ್ನು ಬಿಚ್ಚಿಡುವುದೂ ಸುಲಭವಲ್ಲ
ಹಿಡಿದಿಡುವುದೂ ಲಾಭವಲ್ಲ
ಹೊರಗಿನಪೊರೆಯ ತೆರೆದೊಳಗಿನ ನಿಜ ಕಣ್ಣುಗಳನ್ನು
ಹೇಳುವುದು ಒಳಿತು
ಮೌನವಾಗಿರುವುದು ಮರೆತು-
ಕನಸು ಕಾಣುವವರೆಷ್ಟೋ
ಕನಸು ಕಾಣದಿರುವವರೆಷ್ಟೋ
ಕಂಡ ಕನಸ ಕನಸಾಗಿದವರೆಷ್ಟೋ
ಕನಸಿಗಾಗಿ ಹೋರಾಡಿದವರೆಷ್ಟೋ
ಕನಸ ನನಸು ಮಾಡಿದವರೆಷ್ಟೋ
ನನಸು ಮಾಡುವತ್ತ ನಡದಿರುವವರೆಷ್ಟೋ
ಕನಸು ಮರೆತಿರುವವರೆಷ್ಟೋ
ಮರೆತು ಕನಸು ಕಂಡವರೆಷ್ಟೋ
ಕನಸು ಕೊಂದು ಬದುಕಿರುವವರೆಷ್ಟೋ
ಕೊಂದ ಕನಸ ಜೀವಂತವಾಗಿಸಲು ಮತ್ತೆ ಕನಸ ಕಟ್ಟಿಕೊಂಡವರೆಷ್ಟೋ!-
ಕಾಲು ಎಳೆಯುವಾಗ ಕಾಲ
ನಿನ್ನ ಕೆಳಗಡೆಯೇ ಇರಿಸುವುದು ಮೂಢ!
ಅದೇ ಕೈ ಎತ್ತುವಾಗ ಈ ಕಾಲ
ನಿನ್ನ ಎಂದಿಗೂ ಮೇಲೆಯೇ ಇರಿಸುವುದಂತೂ ಸತ್ಯ ನೋಡ!-
ಕಂಡ ಕಂಡೆಡೆ ಕಂಡಂತೆಯೇ ಕಂಡರೂ
ಕಂಡದ್ದನ್ನೂ ಕರಗತವಾಗರಿಯದೇ ಕಡೆಗಣಿಸದಿರು!
ಕೇಳಿ ಕೇಳಿದೆಡೆ ಕೇಳಿದಂತೆಯೇ ಕೇಳಿದರೂ
ಕೇಳಿದ್ದನ್ನು ಸರಿಯಾಗಿಕೇಳಿಸಿಕೊಳ್ಳದೇ ಕಿವುಡನಾಗದಿರು!
ಕಂಡದ್ದಿರಬಹುದು ಬೇರೆ
ಕೇಳಿದ್ದಿರಬಹುದು ಬೇರೆ
ಕಂಡುಕೇಳಿದರೂ ಹುಳಿಯಾದೀತೆ ನಂಬಿಕೆ ಒಂದಿದ್ದರೆ!-
ಮಾಡುತಿರು ನೀ ನಿನ್ನ ಕೆಲಸ
ಮಾಡುತಿರು ನಿನ್ನಪಾಡಿಗೆ ನೀ ನಿನ್ನ ಕೆಲಸ
ಹೆಸರಿರದಿರಲಿ, ಫಸಲಿರದಿರಲಿ
ಬರವಿರಲಿ,ಬಾರದಿರಲಿ
ತುಳಿಯಲಿ, ಬೀಳಲಿ
ಕಾಯಕದಲ್ಲಿರಲಿ ನಿನಗೆ ತೃಪ್ತಿಯ ಹರುಷ
ಯೋಚಿಸದರು ಉಳಿದದ್ದನ್ನು ಒಂದು ನಿಮಿಷ
ಮಾಡುತಿರು ನೀ ನಿನ್ನ ಕೆಲಸ
ಮಾಡುತಲೇ ಇರು ನಿನ್ನ ಪಾಡಿಗೆ ನಿನ್ನ ಕೆಲಸ
-
ಬಿದ್ದಾಗ ಏಳುವುದ ಕಲಿ
ಸೋತಾಗ ಮತ್ತೆ ಸೋಲದಿರಲು ಕಲಿ
ಕಷ್ಟದಲ್ಲಿ ಎದುರಿಸುವುದ ಕಲಿ
ನಷ್ಟದಲ್ಲಿ ಕಳೆದುಕೊಳ್ಳಬಾರದಂತ ಪಾಠ ಕಲಿ
ಖುಷಿಯಲ್ಲಿ ಖುಷಿಪಡಿಸುವುದ ಕಲಿ
ಸಿರಿತನದಲ್ಲಿ ದಾನ ಮಾಡುವುದ ಕಲಿ
ಬಡತನದಲ್ಲಿ ಇರುವುದರಲ್ಲಿಯೇ ಬದುಕುವುದ ಕಲಿ
ಹೃದಯಒಡೆದ ಕ್ಷಣದಲ್ಲಿ ಗಟ್ಟಿಯಾಗಿ ತಾಳ್ಮೆಯೊಂದ ಕಲಿ!
ಏನೇ ಆಗಲಿ ಒಟ್ಟಿನಲ್ಲಿ ಬದುಕ ಮುನ್ನಡೆಸುವುದ ನೀ ಕಲಿ!-