ಹರಿಸದೆ ಬೆವರು,
ಸಕ್ಕರೆಯಾದೀತು ಉಪ್ಪೂ!
ಸಿಹಿಯಿಲ್ಲದ ಮುಪ್ಪೂ!-
ಜೀವನದಲ್ಲಿ ಎದುರಿಸಿದ ಕಹಿಯನ್ನು ಮರೆತು, ಬದುಕಬಲ್ಲವನು.
ಕಹಿಯುಣಿಸಿದವರನ್ನು ಕ್ಷಮಿಸಿ, ಏಕಾಂಗಿಯಾದರೂ ಮುಂದೆ ಸಾಗಬಲ್ಲವನು!-
ಆಡಿಕೊಂಡು ನಗುವವರು ಬುಡದಲ್ಲೇ
ಇರುವಾಗ,
ಯಾರಲ್ಲಿ ಹೇಳಿಕೊಂಡು ಅಳಲಿ?
ಎಂಬಂತೆ ಬೇಲಿಯೊಳಗೆ ಬದುಕು
ಕಟ್ಟಿರುವೆ,
ಹತ್ತಿರದವರಿಗೂ ಹುತ್ತದ ಒಳಗಿರುವಂತೆ!
-
ಅವನ ಹೃದಯ ತಾಕುವಷ್ಟು ಗಹನವಾಗಿ
ಕಚಗುಳಿಯಿಡುವಷ್ಟು ಹಗುರವಾಗಿ
ಮರೆಯದಷ್ಟು ಮೃದುವಾಗಿ
ಚಿರಕಾಲ ಉಳಿಯುವಾಸೆ....
ಮನಸ ಮಾತಿನ ಮಹಲೊಳಗೆ
ನೆಲಮಾಳಿಗೆ ಕಟ್ಟಿ ವಾಸಿಸುವಾಸೆ!
ಲೋಕ, ಲೆಕ್ಕವೆಂಬುದೇ ಮರೆತು,
ಅವನ ಕಣ್ಣಭಾಷೆಯನ್ನು ಅನುವಾದಿಸುವಾಸೆ!
ಇಂದಿಗಿಂತ ನಾಳೆ, ನಾಳೆಗಿಂತ ಮುಂದೆ
ಚಂದವೆಂಬ ಕನಸು ಬಿತ್ತಿ, ನನಸಾಗಿಸಿ
ಹೊಚ್ಚಹೊಸದರಂತೆ ಹಚ್ಚ ಹಸುರಾಗುಳಿಸಿ
ನಳನಳಿಸುವ ನಗುವಿಗೆ ಕಣ್ಕನ್ನಡಿಯಾಗುವಾಸೆ!!
-
ಆಡಿದ ಮಾತುಗಳಿಂದ ಮನದಲಿ ಮೂಡಿದ ಚಿತ್ರವದೇಕೋ ಮರೆಯಾಗಲೊಲ್ಲದು!
ಹಸಿಮನಸು ಬೆಂದು ಕಲ್ಲಾಗಿರಬೇಕು,
ಇನ್ನಳಿಸಲಾಗದು!?-
ಕೆಲವರ ಬಾಳನದಿಗಿದು ಅಣೆಕಟ್ಟು, ಹರಿಸುವುದು ವಿದ್ಯುತ್ತು!
ಕೆಲವರಿಗೆ ಸೋಲಲು ನೆಪ, ಪ್ರವಾಹ ಮತ್ತು ಕುತ್ತು!-
"ಬರಿ ಬದುಕಿದರೆ ಸಾಲದು, ಪ್ರಾಣಿಗಳೂ ಬದುಕುತ್ತವೆ. ನೀನು
ಏನೂ ಸಾಧಿಸಲೇ ಇಲ್ಲ, ಅದೆಂಥ ಬದುಕು!?" ಅನ್ನುವವರಿಗೆ ಅವನೆಡೆಗೆ ಬೆಟ್ಟು ಮಾಡಿ, ಅವನ ಬದುಕನ್ನು ಒಮ್ಮೆ ಬಾಳಿ ನೋಡಿ, ಬದುಕಿದರೆ ಸಾಕು ಅನಿಸದಿದ್ದರೆ ಹೇಳಿ ಎಂದುಬಿಡು ಅಪೂರ್ವಾ!
-