ಅಂತರಂಗದೊಳು ಮಿಡಿಯುತಿದೆ
ಹೊಸದೊಂದು ಶದ್ಧಶೃತಿಯ ಹಾಡು
ಮಧುರದಿ ಕಲೆತಿಹುದು ಮನದ ಪಾಡು
ನವ್ಯ ಅನುಭೂತಿಯ ಸಿಂಚನ
ಗರಿಬಿಚ್ಚುವ ಮೊದಲೆ
ಕನಸಬುತ್ತಿಯಲೊಂದು ಕವಲು!!
ಅನನ್ಯ ಅನುಭವದ ಅರಿವಿರದೆ,
ಮಮತೆಯ ಮಳೆಯಾಗಿಹುದು ಮನದಿ
ಕಾಣದ ನಂಟೊಂದು ಬೆಸೆದಿಹುದು ಮೌನದಿ.............😍😍😍
-
ಮಧುರವಾದ ಅದೆಷ್ಟೊ ಸಂಭಾಷಣೆಗಳು ಶುರುವಾಗೋದು ಮೌನದಿಂದಲೇ ಅನ್ಸುತ್ತೆ
ಮೌನದಲ್ಲಿದ್ದಾಗ ಮನಸಲ್ಲಿರೋ ಭಾವನೆಗಳು ಅತ್ಯಂತ ಸುಂದರವಾಗಿ ಕಲ್ಪತವಾಗಿರುತ್ತವೆ.ಮೌನದ ಭಾವಗಳು ಮಾತಿನ ರೂಪತಾಳದೆ ಸಂಭಾಷಣೆಯಾಗೋಕೆ ಸಾದ್ಯವಾಗೋದು ಎದುರಿಗಿರೊ ವ್ಯಕ್ತಿ ನಮ್ಮ ಅಂತರಂಗದ ಅಂತರ್ಭಾವಗಳನ್ನ ಕಣ್ಣಿನ ಆವರ್ತದಲ್ಲೇ ಓದೊ ಮನಸ್ಸಿದ್ದಾಗ ಮಾತ್ರ.ಅದು ನಮ್ಮನ್ನ ತುಂಬಾ ಅರ್ಥ ಮಾಡ್ಕೊಂಡು ಪ್ರೀತ್ಸೋರಿಂದ ಮಾತ್ರ ಸಾದ್ಯ.ಇಬ್ಬನಿ ಮತ್ತೆ ಸೂರ್ಯ ರಶ್ಮಿಮ ಸಂಭಾಷಣೆಯ ಹಾಗೆ,ಮುದ್ದಾದ ಹೂ ಮತ್ತೆ ಮೋಹಕ ಭ್ರಮರದ ಸಂಭಾಷಣೆಯ ಹಾಗೆ..............-
ಭರವಸೆಗಳೊಂದಿಗಿನ ಹೊಸ ಆಯಾಮ ಆಯ್ಕೆಗಳನ್ನು ಸೃಷ್ಠಿಸುತ್ತದೆ. ಇಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬುದು ನಮ್ಮ ದೃಢಸಂಕಲ್ಪ ಮತ್ತು ಆಯ್ಕೆಯೊಂದಿಗಿನ ಶ್ರದ್ದೆಯನ್ನು ಅವಲಂಬಿಸಿರುತ್ತದೆ. ಅಸ್ತಿತ್ವವೇ ಆಯ್ಕೆಯೊಂದಿಗೆ ತಳಕು ಹಾಕಿಕೊಂಡಿರುವಾಗ ನಮ್ಮ ಆಯ್ಕೆ ಪ್ರಬುದ್ದತೆಯಿಂದ ಕೂಡಿರಬೇಕು.
-
ನನಗರಿಯದ ಭಾವದಲಿ
ಜೊತೆಯಾದ ಮೌನ
ಸಂತಸದಿ ಮಿಂದಿದೆ ಮನ
ಮಿಂಚಿನ ಮೆಲುನಗೆಯು
ನಿನ್ನ ಮೊಗ ಸಿಂಗರಿಸಿರಲು
ಮುಗ್ಧ ಮಗುವಾದೆ ನಾನು
ನಿನ್ನ ವಾತ್ಸಲ್ಯದ ಮಡಿಲಲ್ಲಿ
ನಾನಾಡಲು ಮರುಮಾತೆಲ್ಲಿ??
-
ಮನಸ ಮಾನಸದಲ್ಲಿ
ನಿನ್ನಂಕಿತದ ಪ್ರತಿಧ್ವನಿಯ ಝೇಂಕಾರ
ಬೇಕಿಲ್ಲೆನಗೆ ಬೇರಾವ ಇಂಪಿನ ಶ್ರವಣ
ನೀಡಿರುವೆ ನೀ ನಿನ್ನ
ಹೃದಯದೂರಿನ ಅರಸಿಯ ಪಟ್ಟ
ಬಯಸುವೆ ಸದಾ ನಿನ್ನ ಸಾಮೀಪ್ಯ
ತಾರೆಗಳ ಚಪ್ಪರದಡಿ ಬೆಳದಿಂಗಳ ಕೈತುತ್ತಿಗೆ
ಅನಂತ ಬಾಳಪಯಣದ ಸಂಗಾತಿಯಾಗಿ
ಜೀವನದೆಲ್ಲ ಸಿಹಿ-ಕಹಿ ಹೂರಣವ
ಜೊತೆಯಾಗಿ ಸವಿಯಲು ನಿನ್ನೊಂದಿಗೆ
-
ತಂದೆಯ ಮೊಗದಿ ಸದಾ ಕಿರುನಗೆಯೊಂದ ಕಾಯ್ದಿಡಲು
ಜೀವನದ ಮಹದಾಸೆಯನ್ನೇ ತ್ಯಜಿಸಿದವಳು "ಮಗಳು"-
ಮಾತುಗಳಲ್ಲಿ ಹೇಳಲಾಗದ ಅಗಣಿತ ಭಾವಗಳ
ಅರ್ಥೈಸಿ ನಿನ್ನೊಲವಿನ ಸಾಂಗತ್ಯದಿ ...
ಎನ್ನೋಲೈಸುವ ಪರಿಯಿಂದಲೇ ನೀ ಸೆಳೆದೆ ಮನವ
ತುಟಿಯಂಚಿನ ಮುಗುಳುನಗೆಯಲಿ ಏನೋ ಜಾದುವಿದೆ!!
ಮನದ ಮೂಲೆಗಳಲ್ಲಿ ನಿನ್ನದೇ ನೆನಪಿನ ಆಸರೆ
ಗುನುಗು ಗುನುಗಿನ ಗುಂಗಲ್ಲಿಯೂ ನಿನ್ನ ಹೆಸರೆ...
ಕನಸಿನ ಕನವರಿಕೆಗು ನಿನ್ನದೆ ನೆಪವೊ....
-
ನಿನ್ಪ್ರೀತಿ ಪರವಾನಗಿಗೆ
ರುಜು ಮಾಡಿದನು
ಆ ಪ್ರೇಮ ಚಂದಿರನು
ಬೆಳದಿಂಗಳ ಚೆಲ್ಲುತ ಭುವಿಗೆ
ಬೆಳ್ಳಿಚುಕ್ಕಿಯ ಉಡುಗೊರೆಯೊಂದಿಗೆ
ಕಿರು ಬೆರಳ ಜೊತೆಮಾಡಿ
ಅಗ್ನಿ ಸಾಕ್ಷಿಯಲಿ ಏಳ್ಹೆಜ್ಜೆ ಬೆಸೆದು
ನಿನ್ನೊಲವಿನರಮನೆಯ ಒಡತಿಯಾಗಿ
ಬಾಳ ಪಯಣಾಂತ್ಯದೊರೆಗೂ
ಪ್ರೀತಿ ಸಿಹಿ ನೀಡೆಂದು...
-
ಮನಸಿನಾಳಕಿಳಿದ
ಮಧುರಾತಿಮಧುರ ಸ್ವರಗಳ ಕಂಪನ
ಝೇಂಕರಿಸುತ ಕನಸ ಪರಿಧಿಯಲೊಮ್ಮೆ ಇಣುಕಿ..!!
ಅಗಾಧ ವೈಶಾಲ್ಯದ ಮನೋನ್ಮಂದಿರದ
ಬಿತ್ತಿಚಿತ್ರಗಳಲ್ಲಿ ಹೊಳೆವ ನೆನಪುಗಳ ಹೆಕ್ಕಿ
ಕುಹಕರಾಗವ ಹಾಡಿತ್ತೆನ್ಮನವದುವೆ
ಎನಗರಿವಿಲ್ಲದಂತೆ..ಹಸಿರ ಐಸಿರಿಯಲ್ಲಿ
ಮಧುರ ಮಂಜುಳಗಾನ ಜುಳು ಜುಳು
ಹರಿವ ತುಂಗೆಯದ್ದು!!
ಇಹದ ಸೊಬಗೆಲ್ಲ ತನ್ನ ಮಡಿಲೆಂದು ಬೀಗುತಿತ್ತು ಆ ಗಿರಿಯಬಿಂದು !
ಅಲ್ಲೊಂದು ಸುಮವನವು ಕೂಗಿ ಹೇಳಿತ್ತು
ಸೃಷ್ಠಿ ಲಾವಣ್ಯ ನಾನೇ ಎಂದು!
ರಂಗುರಂಗಿನ ಭ್ರಮರ ಹಕ್ಕಿ ಪಕ್ಷಿಯ ರಾಗ
ಎನ್ನೊಳಗೆ ಮೂಡಿಸಿದೆ ಸಮ್ಮೋಹನ......
ತುಂತುರಿನ ಸೋನೆಮಳೆ ಹರಿಸಿ ಪ್ರೀತಿಯ ಹೊಳೆ
ಆ ಮಣ್ಣ ಸೊಗಡಿನ ಕಂಪು ಸೂಸುತಿರುವಾಗ ಮಯೂರ ತಾ ಕುಣಿದು ನಲಿಯುತಿಹುದಲ್ಲಿ
ನಮ್ಯ ಮನವಿದುವೆ ನಲಿದು ತೇಲಿಹುದು ಈ ಹಸಿರ ಮಡಿಲೊಳಗೆ .....
-