ಅದು ಸಂಜೆ, ಅವಳ ಬೆತ್ತಲು ಇಣುಕಿತು...
ಕಾಣದವರೆಷ್ಟೋ, ಕಂಡು ಕಂಗಾಲಾದವರೆಷ್ಟೋ...
ನಿತಂಬದ ನಿಷ್ಕರುಣೆ ಅದಿರಲಿ ಸೊಂಟದ ಸೊಂದಿಗಳದ್ದೇ ಸದ್ದು...
ಅವಳ ಮೊಲೆಯ ಮಜಲು, ಮಾತೋ ಮಾತು, ಮಿತಿಯೇಯಿಲ್ಲದ ಮಾತು...
ಪಕ್ಕೆಲುಬ ಕಂಡ ಮುದುಕನ ಭಾವ ಜಿನುಗಿತು, ಹುರುಪು ಹಸಿರಾಯಿತು...
ಅವಳ ದೇಹ, ಇವರ ವಿಮರ್ಶೆ, ಇವರ ಮಾತು ಅವಳ ಮಾರ್ದವತೆ...
ಅವನು, ಇವನು, ಅವರು ಇವರು, ಕಂಡವರೆಲ್ಲರೂ ಕೂತು ಕಥೆಗಳ ಕಟ್ಟಿದರು...
ನಡತೆಯ ಕೊಚ್ಚೆಯಲಿ ಮಿಂದೆದ್ದು, ಮತ್ತೂ ಕೆಲವರ ನಿದ್ದೆಗೆಡಿಸಿ ಅಂದರು, ಛೇ!! ಅಸಹ್ಯ...
ತಮ್ಮ ಮನೆಗಳ, ಮನೆ ಮಕ್ಕಳ, ಬಾಗಿಲ ಹಿಂದಿನ ವಿವಿಧ ಭಂಗಿಗಳ ಸ್ವರೂಪ ಒಮ್ಮೆ ನೋಡಲಿ...
ಮತ್ತದೇ, ಅವಳ ದೇಹ, ಇವರ ವಿಮರ್ಶೆ, ಇವರ ಮಾತು ಅವಳ ಮಾರ್ದವತೆ...
-
Insta Handle: directornaik
ಅದೊಂದು ಸಂಜೆ ಹೇಳದೆಯೇ ಹಾಗೆ ನಡೆದು ಬಿಟ್ಟಳು
ಬರಿದಾದದ್ದು ನೆನಪುಗಳಲ್ಲ, ಹೃದಯವೂ ಅಲ್ಲ, ಅವಳು... ನನ್ನಿಂದ ಬರಿದಾದಳು...
ಅವೇ ರಸ್ತೆಗಳು, ಪುನಃ ಪುನಃ ಜನಜಂಗುಳಿಯ ಮಧ್ಯೆಯೇ ಖಾಲಿ...
ಅದೇ ಹೋಟೆಲಿನ ಬೆಂಚು, ಅದರ ತುಂಬೆಲ್ಲಾ ತಿನುಸುಗಳ ಸರಬರಾಜು, ಉಹೂಂ, ರುಚಿಯಿಲ್ಲ...
ಟಾಕೀಸಿನ ತುಂಬೆಲ್ಲಾ ಕತ್ತಲು, ಅಯೋಮಯ, ನಾನೊಬ್ಬನೇ ಅಲ್ಲಿ, ಬೆಳಕಿನಡಿಯ ಹುಂಬ...
ಹಾಸಿಗೆಯ ಹಾಸು ನೂರಾರು ಬಾರಿ ಬದಲಾಗಿದೆ, ಅಲ್ಲಿ ಒಂಟಿಯಲ್ಲ, ಬೆತ್ತಲ ಮೌನಿ ನಾನು...
ಅವಳದು ನನ್ನದೂ ನಗುವಿರುವ ಚಿತ್ರ, ಮತ್ತೆ ಮತ್ತೆ ನೋಡಿದಾಗ ನೀರವ ಕಂಡಿತು...
ಅಂದಿನ ಆಳು, ಇಂದಿನ ನಗು, ಮಧ್ಯೆ ಮಧ್ಯೆ ಮಾತು, ನನ್ನೊಳಗಣ ಅವಳೊಂದಿಗೆ...
ಸುಪ್ತದ ಸರಾಗ ಬೈಗುಳ, ನಿತ್ಯ ಏಕಾಂತದ ಅಚ್ಚರಿ, ಕಿಂಚಿತ್ತೂ ಕಾಣದ ಅಪ್ಪಳಿಕೆ...
ಆಗೀಗ ಓಡಿದೆ, ಬಿದ್ದೆ ಮತ್ತೆ ಎದ್ದೆ, ಬದುಕು ನನ್ನದೇ, ಬವಣೆಯೂ ನನ್ನದೇ, ಬೆತ್ತಲ ಮೌನಿ ನಾನು...
-
ಅಂದು ಸಂಜೆ ಅದೇ ಕಲ್ಲು ಬೆಂಚಿನ ಮೇಲೆ ಅವನು ಕೂತ...
ಅದೆಲ್ಲಿಂದಲೋ ಸಣ್ಣಗೆ ಬಂದ ಸಂಪಿಗೆಯ ಘಮವ ಹೀರುತ್ತಾ...
ಅಂದೇ ಸಂಜೆ ಅವಳು ಅಲ್ಲಿಗೆ ಬಂದಳು, ತನ್ನಿಷ್ಟದ ಮೆಜೆಂಟಾ ಬಣ್ಣದ ಸೀರೆಯುಟ್ಟು...
ಕೈಲಿದ್ದ ಇವನ ಪುಸ್ತಕವ ಮೊದಲು ನೋಡಿದ ಅವಳು, ಇವನ ಗುಂಗರು ಕೂದಲಿನ ಕಡೆಗೆ ಕಣ್ಣ ಹರೆಸಿದಳು...
ಅವನ ಕಣ್ಣು ಅದು ಹೇಗೋ ಬಿತ್ತು ಇವಳ ಮೇಲೆ, ಜೇನು ಬಣ್ಣದ ಇವಳ ಬೆನ್ನ ಮೇಲೆ...
ಇವನ ಕೈಗಳಲ್ಲಿ ಪ್ರೇಮ-ಕವಿಯ ಹೊತ್ತಿಗೆ, ಅವಳದರ ಪೂರಾ ಕೆಂಪು ಬಳೆಗಳು...
ಸುತ್ತಲಿದ್ದ ಹಸಿರಿಗೋ, ಅವಳ ಸೀರೆಯುಟ್ಟ ಚಂದಕ್ಕೋ, ರೈಲಿನಂತೆ ಸದ್ದು ಮಾಡಿತಿವನ ಹೃದಯ...
ಅವಳ ಕಂಗಳ ಮೇಲೆ ಇನ್ನಿಲ್ಲದ ಕೋಪ ಇವಳಿಗೆ, ಮತ್ತೊಂದೆಡೆ ನೋಡೆಂದರು, ಕೇಳುತ್ತಿಲ್ಲ ಮಾತು...
ಮೌನವ ಮುರಿದಾದರೂ ಸರಿ, ಅವಳ ಮಧುರ ಕಂಠವ ಕೇಳಲು, ಅತ್ತ ಹೊರಟ...
ಇತ್ತ ಅವಳದೂ ಅದೇ ಖಯಾಲಿ, ಅವಳೂ ಇತ್ತಿಂದ ಬಂದಳು...
ಸೀಸಾ ಹುಯ್ದ ಸ್ಥಿತಿ ಇಬ್ಬರದೂ, ಮಾತುಗಳು ಓಡೋಡಿ ಬಾಯಿಗೆ ಬಂದರೂ, ತುಟಿಗಳ ಕದವ ತೆರೆಯಲಿಲ್ಲ...
ಅವನಿಗೆ ತನ್ನೊಳಗೆ ಒದ್ದಾಟ, ಅವಳ ಮನದಿ ಮಾತುಗಳ ಚೀರಾಟ... ಇನ್ನೂ ಮಾತಿಲ್ಲ...
ಸಂಪಾದಿಸಿದ ಸಂಪಿಗೆಯ ಈತ ಕೊಟ್ಟ, ಒಮ್ಮೆಗೇ ಇಬ್ಬರೂ ನಕ್ಕರು, 'ಸುಮ' ಅವಳೆಂದಳು...-
ರಹೀಮ ಬರಲಿಲ್ಲ, ರಾಮನೂ ಅಲ್ಲಿರಲಿಲ್ಲ.
ಮಾನ ಮುಚ್ಚುವ ಬಟ್ಟೆ ರಂಗು ಪಡೆದು ರಾಜಕೀಯವಾಯಿತು
ವಿದ್ಯೆಯದು ವ್ಯವಹಾರವಾಯಿತು, ಧಾರ್ಮಿಕತೆಯ ಸೋಗು ರೌದ್ರವಾಯಿತು
ಮನುಷ್ಯ ನೀನ್ ಬದಲಾದೆ, ಉತ್ಕೃಷ್ಟವಾಗಲ್ಲ, ಕೇವಲ ಮತವಾಗಿ.
ಹಸಿರದು ಅವರದು, ಕೇಸರಿಯದು ನಮ್ಮದು!!! ಛೇ, ಬಣ್ಣ ಭಾವನೆಗಳ ಸೂಸೋ ಕಾಮನಬಿಲ್ಲಾಗಬೇಕು, ರಕ್ತ ಹರಿಸೋ ರಿಂಗಣವಾಗಬಾರದು.
ತಾ ನೀಚ, ನೀನ್ ಉತ್ಕೃಷ್ಟ, ಎಲ್ಲಿಯದೀ ಭಾವನೆ? ಸಂತನೊಬ್ಬ ಬರೆದನೋ, ಪೈಗಂಬರನು ಹೇಳಿದನೋ?
ಭುವಿಯೊಂದೇ, ಬಾನೊಂದೆ!!! ಭುಗಿಲೆದ್ದಿತೇಕೆ ಕೋಮು ಗಲಭೆ?
ನೀ ಹಂಚಿದರಲ್ಲವೇ ಪ್ರೀತಿ, ನೀ ಬಿತ್ತಿದರಲ್ಲವೇ ವಿಷ?
ಇನ್ನೆಂದಿಗೆ ಬದಲಾಗುವೆಯೋ ಮನುಜ? ಇನ್ನೆಂದಿಗೆ ಮಾನವನಾಗುವೆ?
~
ಅಜಯ್ ನಾಯಕ್— % &-
ನೆನಪಿನಲ್ಲೇ ಉಳಿಯಲಿ ಅವಳ ಚಿತ್ರ, ಮತ್ತೊಮ್ಮೆ ಕಣ್ಣ ಮುಂದೆ ಬಾರದಿರಲಿ.
ತಿರುಗಿ ಮತ್ತೆ ಬಾರದಿರಲಿ ಅವಳ ಕಲ್ಪನೆ, ಮರುಗಿದರೂ ನಾನು ಬೀಳ್ಕೊಡುಗೆಯನಿಂದು ಕೊಡುವೆನು.
ಹಿತವಾದ ಶಾಖ ಕೊಟ್ಟ ಅವಳ ಕೈಗಳು ಸೋಕದಿರಲಿ ಮತ್ತೊಮ್ಮೆ ಎನ್ನ ಮೇಲೆ,
ಹಿಡಿತವ ಸಾಧಿಸಿದ ಅವಳ ವ್ಯಕ್ತಿತ್ವವ ಸಿಹಿ ಮೊಗದಲ್ಲೇ ತೊಳೆಯುವ ಹಂಬಲ ಇಂದು
ಅಡ್ಡಾಡಿದ ರಸ್ತೆಗಳಿಗೇ ಹೋಗುವೆನು ನಿರಂತರ, ನಿಂತು ನೋಡುವೆ ನಮ್ಮಿಬ್ಬರ ಗತವ ಅಲ್ಲಿ,
ಗತದಲ್ಲೇ ಉಳಿದುಹೋಗಲಿ ಅವಳ ನೆನಪು, ಗತಿಸಿ ಹೋಗಲಿ ನನ್ನಿಂದ ಸ್ಪರ್ಶದ ಸಂತೋಷ.
ಹೊರಟ್ಟಿದ್ದು ಅವಳು ಮೊದಲು, ಇಲ್ಲೂ ಅವಳೇ ಮೊದಲು, ಹೋಗುವ ಹಂಬಲ ನನಗೂ ಮುಂದೆ, ಅದೇಕೋ ಅಂದಿನಿಂದ ಅಲ್ಲೇ ನಿಂತು ಬಿಟ್ಟಿತು ಕಾಲದ ಕಾಲು, ಬರಿಯ ನನ್ನ ಕಾಲು.
ನಗಲಿ ಅವಳ ನಿರಂತರ, ಸಾಗಲಿ ಅವಳ ಪಾಯಣ ಸುಖವಾಗಿ, ತಡೆದರೂ ನಿಲ್ಲದ, ತಡೆಯಲೂ ಆಗದ ಅವಳ ನೆನೆಪು, ನೆನಪಾಗಿಯೇ ಉಳಿಯಲಿ, ಬಾರದಿರಲದು ಇನ್ನೊಮ್ಮೆ ಕಣ್ಮುಂದೆ.
ನಾನೇ ಗತಿಸುವ ಮೊದಲು ಘೋರಿಯೊಳಗೆ ಸೇರಿಲಿ ಅವಳ ನೆನಪು
~
ಅಜಯ್ ನಾಯಕ್-
One more time,
Cuddle me with words, for I shall cuddle you with kisses
Let's walk to those empty roads looking above us those stars again
I shall my love, hold your hands tight for all the stars shall shower on us
Just one more time, let me stay in you and bury you in me...-
ನಿಶ್ಚಲವಾಗಿ ನಿಂತ ಅದೆಷ್ಟೋ ಬೀದಿ ದೀಪಗಳು,
ಇನ್ನಷ್ಟು ಮರ-ಗಿಡಗಳು ಹಾದುಹೋದವು ಹಾಗೆ.
ಪಕ್ಕ ಕುಳಿತಿದ್ದ ಪ್ರೇಯಸಿಯ ಹಿತವಾದ ಕೈಗಳ ಬೆಚ್ಚನೆಯ ಸ್ಫರ್ಶ,
ಆಗೀಗ ತುಟಿಬಿಚ್ಚಿದರೂ, ಜೋರಾಯಿತು ಕಣ್ಗಳ ಸಂಭಾಷಣೆ,
ಬೇಕಾದ್ದು ಸಿಕ್ಕಾಗ ಮನುಜನಿಗೆ ಮಾತೇಬಾರದೇಕೆ?
ದೂರವಾಣಿಯಲ್ಲಿ, ದೋಸೆಯನ್ನು ಸವಿಯುತ್ತಾ ಇನ್ನು ಅನೇಕ ಬಾರಿ ಸಿಗದ ತೃಪ್ತಿ ಈ ಮೌನದಲ್ಲಿ!!!
ಪರಾಕಾಷ್ಠೆಯಲ್ಲ, ಉತ್ತುಂಗವಲ್ಲ ಹಾಗೆ ಸುಮ್ಮನೆ ನಿಶ್ಚಲ ನೀರವ ಮೌನ,
ಬೀದಿ ದೀಪಗಳು ಮರಗಳ ನಡುವೆಯಿದ್ದ ಮೌನ ನಮ್ಮಿಬ್ಬರ ನಡುವೆ,
ಮಾತಿಗೆ ಬೇಕು ಭಾಷೆ, ಮೌನಕಲ್ಲ!! ಮೌನಕ್ಕೆ ಬೇಕಾದ್ದು ತನ್ಮಯ ಚಿತ್ತವಷ್ಟೇ!!!
-
ಸುರಿಯಲಿ ಮಳೆಯದು ಕುಂಭದ್ರೋಣದಂತೆ, ಒಮ್ಮೆಲೇ ತೊಳೆದು ಬಿಡಲಿ ಒಳಗೆ ಕೊಳೆಯುತಿಹ ಕಳೆಯ
ನೆನೆದುಬಿಡುವೆ ಬಿಡುವೇ ಸಿಗದಂತೆ ಬರಿಮಯ್ಯಲಿ, ಬೆಂಡು ಬಸವಳಿದ ದೇಹ ಮತ್ತೊಮ್ಮೆ ಚಿಗುರಲಿ.
ಸೃಷ್ಟಿಸಲಿ ಎನ್ನೆದೆಯೊಳಗೆ ಹಸಿರಾದ ಪೈರನು, ಬಂಜೆತನದ ಬಂಜರದು ಹುದುಗಲಿ ಇನ್ನಾದರು
ಹೊಲೆವ ಯಂತ್ರದಂತೆ ಹೆಣೆಯಲಿ ಹನಿಯು ಹರಿದು ಮಾಸಿರುವ ಬದುಕನು, ಸಖ್ಯವಿಲ್ಲದಿದ್ದರೂ ಸಾಕ್ಷಾತ್ಕರಿಸಲಿ ನಗೆ.
ಅಳೆದು ಹೋಗಲಿ ಬದುಕು ಕೊಟ್ಟ ಬೇಡದ ಬಣ್ಣಗಳು, ಸುರಿದ ನಿಂತ ಮುಗುಲಿನಂತೆ ತಿಳಿಯಾಗಲಿ,
ಕಾಮನೆಗಳ ಕಾಮನಬಿಲ್ಲದು ಬೇಡವು ಎನಗೆ, ಶುಭ್ರವಾದ ನೀಲಾಕಾಶದ ವರ್ಣವೇ ಸಾಕು.
ಸಿಹಿಯುಣಿಸದಿದ್ದರೇನಂತೆ, ಕಹಿಯ ಕಾರಾಗೃಹದ ಬೇಗೆಯ ತಣಿಸಲಿ ತಕ್ಷಣಕ್ಕೆ,
ಸುರಿದುಬಿಡು ಮಳೆಯೇ, ಬಸೆದು ಹೋಗಲಿ ಮನವು ಮನ್ವಂತರದೊಳಗೆ, ಇನ್ನೊಮ್ಮೆ ಸುರಿದುಬಿಡು.....
~ ಅಜಯ್ ನಾಯಕ್-