ಭಾವನೆಗಳ ಸಂಗಮ,ನಿನ್ನ ಕಂಡು ಸಂಭ್ರಮ|
ಆಸೆಗಳ ತೋರಣ, ಮನದ ತುಂಬ ಹೂರಣ|
ಎಷ್ಟು ಮಧುರ ಈ ಕ್ಷಣ ...
ಎಷ್ಟು ಮಧುರ ಈ ಕ್ಷಣ ...||
ಚೈತ್ರಕಾಲದಲ್ಲಿ ಬರುವ, ಚಿಗುರಿನಂತೆ ನಿನ್ನ ನಗುವು|
ಅದನು ಸವಿಯಲೆಂದು ಬರುವ, ಹಾಡು ಹಕ್ಕಿ ನನ್ನ ಮನವು|
ಮನದಿ ನಗುವು ಸೇರಿದಾಗ, ಭಾವರಾಗ ಹೊಮ್ಮಿದಾಗ|
ಎಷ್ಟು ಮಧುರ ಈ ಕ್ಷಣ ...
ಎಷ್ಟು ಮಧುರ ಈ ಕ್ಷಣ ...||
ಜೋಡಿ ಹಕ್ಕಿಯಂತೆ ನಾವು, ಪ್ರೇಮ ಫಲವ ಹಂಚಿ ತಿಂದು|
ಬಾಳ ಪಯಣದಂಚಿನವರೆಗೆ,ಕೂಡಿಕೊಂಡು ಸಾಗಿ ಬಂದು|
ತೋಳತೆಕ್ಕೆಯಲ್ಲಿ ಅಡಗಿ, ಮೆಲುಕು ಹಾಕುವಂಥ ಘಳಿಗೆ|
ಎಷ್ಟು ಮಧುರ ಈ ಕ್ಷಣ ...
ಎಷ್ಟು ಮಧುರ ಈ ಕ್ಷಣ ...||-
ತಂಪಾದ ಚಂದಿರನು, ಆ ನೀಲಿ ಬಾನಿನಲಿ
ಬೆಳದಿಂಗಳ ಜೊತೆಯಲ್ಲಿ ಬಂದಾಗ... |
ನಿನಗಾಗಿ ಮನ ಕೂಗಿ, ತಂಗಾಳಿ ಹಿತವಾಗಿ
ಸಿಹಿ ಮಾತು ಕಿವಿಯಲ್ಲಿ ಅಂದಾಗ... ||
ಓ ಗೆಳತಿ ಕೇಳೆ... ಈ ಸುಂದರ ವೇಳೆ...
ನೀ .. ದೂರ.. ಯಾಕಿರುವೆ ... ಬಾ ಬೇಗ||
ಚುಕ್ಕಿ ಚಿಕ್ಕಿ ಕೊಡುವೆ ಬಾರೆ,
ಪ್ರೀತಿ ಹಚ್ಚೆ ಇಡುವೆ ಬಾರೆ
ಗುಟ್ಟೊಂದು ತುರ್ತಾಗಿ ಹೇಳಲೇಬೇಕು
ನೀ ದೂರ ಯಾಕಿರುವೆ ... ಬಾ ಬೇಗ||೧||
ಮುದ್ದು ಮೋಡ ಕರಗೋ ಮೊದಲು
ಬೆಳ್ಳಿ ಬೆಳಕು ಅರಳೋ ಮೊದಲು
ಸಿಹಿಯಾದ ಮುತ್ತೊಂದು ಕೊಡಲೇಬೇಕು
ನೀ ದೂರ ಯಾಕಿರುವೆ ... ಬಾ ಬೇಗ||೨||-
ಮೋಹ ನಗರಿಗೆ ಹೋದೆನು ನಾನು |
ಮೋಹನ ಗರಿಯ ಹಿಂದೆ ನಾನು ||
ಮುರಳಿಯ ಮೋಹಕ ಕಣ್ಣ ಸೆಳೆಯಿತು |
ಹಸಿರು ನೀಲಿಯ ಬಣ್ಣವು ||ಮೋಹನಗರಿ||
ಯಮುನಾ ತೀರದಿ ತೇಲುತ ಬಂತು |
ನವಿಲಿನ ಹಾಗೆ ಕುಣಿಯುತಲೀ ||ಮೋಹನಗರಿ||
ರಾಧೆಯ ಹಾಗೆ ಪರವಶಳಾದೆ |
ಸೋತೆನು ಹೃದಯವ ಕ್ಷಣದಲ್ಲಿ ||ಮೋಹನಗರಿ||-
ಮಳೆ ಮುಗಿಲು ಮೂಡಿದೆ ,
ಇಳೆಯೆದೆಯು ಅರಳಿದೆ,
ತಂಪೆರೆದು ತಣಿಸೆಂದು ಬೇಡಿದೆ...
ನಿನಗಾಗಿ ಎಲ್ಲೆಲ್ಲೂ ಹುಡುಕಿದೆ....||
ಗಿರಿ ನವಿಲು ಕುಣಿದಿದೆ ,
ಚಿಗುರೆಲೆಯು ನಾಚಿದೆ ,
ಮನಸೇಕೋ ಹಠವೊಂದು ಮಾಡಿದೆ...
ನಿನಗಾಗಿ ಎಲ್ಲೆಲ್ಲೂ ಹುಡುಕಿದೆ....||
ಹಕ್ಕಿಗಳು ಗೂಡನ್ನು ಸೇರಿವೆ ,
ಚುಕ್ಕಿಗಳು ಮರೆಯಲ್ಲಿ ಅಡಗಿವೆ ,
ತಂಗಾಳಿ ಹಿತವಾಗಿ ಮೈಯೆಲ್ಲ ಸೋಕಿದೆ
ತಂಪಾದ ನೆನಪೊಂದು ಮನಸೆಲ್ಲ ತುಂಬಿದೆ ||
ಮನಸೇಕೋ ಹಠವೊಂದು ಮಾಡಿದೆ...
ನಿನಗಾಗಿ ಎಲ್ಲೆಲ್ಲೂ ಹುಡುಕಿದೆ....||-
ಸುಮ್ಮನೆ ಹುಟ್ಟಲಿಲ್ಲ
ನಿನ್ನ ಮೇಲೆ ಪ್ರೀತಿ ನನಗೆ,
ಓ ಮನವೇ....
ಭಾವನೆಗಳ ನಿಶ್ಯಬ್ದ
ಬೀದಿಯಲ್ಲಿ ಕಳೆದು ಹೋದ
ಏಕಾಂಗಿ ಮನವ.... ನೀ ಹುಡುಕಿ ಕೊಟ್ಟೆ
ನನ್ನೊಲವೇ...
ಸುಪ್ತ ಕನಸುಗಳ ಎಚ್ಚರಿಸಿದೆ ನೀ
ಮುಕ್ತವಾಗಿ ಬೆರೆತು ನಗುವ ಕಲಿಸಿದೆ ನೀ
ಮತ್ತೆ ಎದೆ ಗೂಡಿನಲ್ಲಿ ಪ್ರೀತಿ ಹಕ್ಕಿ
ನೆಲೆಯಾಗಿಸಿದೆ ನೀ..
ಸುಮ್ಮನೆ ಹುಟ್ಟಲಿಲ್ಲ
ನಿನ್ನ ಮೇಲೆ ಪ್ರೀತಿ ನನಗೆ,
ಓ ಮನವೇ...-
ಮಾತುಗಳು ಸಾವಿರಾರು
ಇದ್ದರೂ ....
ಪದಗಳನು ಹುಡುಕುವುದು
ಹೃದಯವು ...
ಹೆಸರು ಕೂಗಿ ಕರೆದಾಗ ,
ಅವನೆದುರು ಬಂದಾಗ ,
ಏನು ಹೇಳಲಿ? ...
ಹೇಗೆ ಕೇಳಲಿ? ...
ಅನಿಸುವುದೇ ನನ್ನಂತೆಯೇ ನಿನಗೂ?
ತುಟಿ ಮೀರಿ ಬರದ ಪದವು ,
ಕಣ್ ಸೇರಿ ಇಣುಕಲು ಶುರುವು ,
ಅನಿಸುವುದೇ ನನ್ನಂತೆಯೇ ನಿನಗೂ?
ಹಗಲಲ್ಲೂ ಕಾಣುವೆ ಕನಸು ,
ಬಳಿ ಬಂದು ತೋಳಲಿ ಬಳಸು ,
ಅನಿಸುವುದೇ ನನ್ನಂತೆಯೇ ನಿನಗೂ?-
ಬಾ ಮಳೆಯೆ ಬಾ, ಬಾ ಬಾ ಮಳೆಯೆ ಬಾ|
ಜಡಮನದ ಕೊಳೆಯನ್ನು , ತೊಳೆ ನೀನು ಬಾ
ಸಡಗರದ ಸಿಹಿ ಸೆಲೆಯ, ಹೊಳೆ ಹರಿಸು ಬಾ || ಬಾ ಮಳೆಯೆ||
ಚಿಟಪಟನೆ ಹನಿ ಹನಿಯು, ಮೈಯೆಲ್ಲಾ ತೋಯಿಸಿ
ಸಿಹಿಯಾದ ಮುತ್ತುಗಳ, ಮಣಿಮಾಲೆ ತೊಡಿಸಿ
ನಿನ್ನೆದೆಯ ಊರಿಂದ ನೀ ತಂದ ಸಂದೇಶ
ನೀನೇನೇ ಹೇಳಿದರು ನನಗದುವೆ ಆದೇಶ ||ಬಾ ಮಳೆಯೆ||
ನೆನೆದಷ್ಟು ನೆನೆವಾಸೆ , ನಾ ಚಿಗುರು ಎಲೆಯಾಗಿ
ಕುಣಿದಷ್ಟು ಕುಣಿವಾಸೆ , ನಾನಿಂದು ನವಿಲಾಗಿ
ನಿನಗಾಗಿ ತನುವರಳಿ ಹೂವಾಗುವಾಸೆ
ನಿನ್ನೊಳಗೆ ಹಿತವಾಗಿ ಒಂದಾಗುವಾಸೆ ||ಬಾ ಮಳೆಯೆ||-
ಪದೇ ಪದೇ ನೀ ಬಂದು
ಕನಸಿನಲಿ ಕಾಡಿಸುವೆ ||2||
ನನ್ನನೆ ಮರೆಸುವೆ... ನನ್ನ ನಾ ಮರೆಯುವೆ....
ಕನ್ನಡಿಯ ಬಿಂಬದಲ್ಲಿ, ನಿತ್ಯ ನೀನೇ ಕಾಣುವೆ....
ಕೈಯ ಬಳೆಯ ಶಬ್ದದಲ್ಲಿ, ನಿನ್ನ ನಗುವ ಕೇಳುವೆ....
ನಾಚುತ ಮನದೊಳಗೆ
ನಕ್ಕು ಸುಮ್ಮನಾಗುವೆ ||2||
ನನ್ನನೆ ಮರೆಸುವೆ... ನನ್ನ ನಾ ಮರೆಯುವೆ....
ಇಲ್ಲೆ ಏಲ್ಲೋ ನಿಂತ ಹಾಗೆ, ಸುಳ್ಳು ಭಾವ ಮೂಡಿಸಿ....
ಕಲ್ಪನೆಯ ಲೋಕದಲ್ಲಿ, ತೇಲುವಂತೆ ಮಾಡುವೆ....
ನಾಚುತ ಮನದೊಳಗೆ
ನಕ್ಕು ಸುಮ್ಮನಾಗುವೆ ||2||
ನನ್ನನೆ ಮರೆಸುವೆ... ನನ್ನ ನಾ ಮರೆಯುವೆ....-
ನೀ ಬರೆದ ಪ್ರೇಮದ ಓಲೆ , ನಾ ಓದಿ ಸೋತು ಹೋದೆ
ಹೊಸ ಸ್ಪಂದನ ರೋಮಾಂಚನ ನಿನ್ನರಸಿ ಓಡಿ ಬಂದೆ ||
ಶಬ್ದ ಜಾಲದಿ ನನ್ನ ಬಂಧಿಸಿ , ಮನವ ಸೂರೆಗೊಂಡಿಹೆ |
ನಿನ್ನ ಮನದ ಭಾವ ಅರಿತು, ಮನವು ಮುದದಿ ಅರಳಿದೆ |
ನನ್ನ ಒಲವು ನಿನಗೆ ಅರ್ಪಣೆ , ತೆರೆದ ಹೃದಯದಿ ಸಾರುವೆ|
ಕೇಳು ಇನಿಯ, ನಿನ್ನ ಪ್ರೀತಿಯ
ಒಡನೆ ನಾನು ಒಪ್ಪಿದೆ... ಒಪ್ಪಿದೆ ||
ಏಕೆ ಹೆದರಿ ಬಚ್ಚಿ ಕೊಂಡಿಹೆ , ನನ್ನ ಬಳಿಗೆ ಬಾರದೆ |
ನಿನಗೆ ಸ್ವಂತ ನಾನು ಸೀಮಿತ , ಇನ್ನು ಚಿಂತೆ ಏತಕೆ |
ಹದ್ದು ಮೀರಿ ಮಿಡಿಯುತಿರುವ, ಎದೆಯ ಬಡಿತವ ಆಲಿಸು |
ಮುಂದೆ ಬಂದು ಕೈಯ ಹಿಡಿದು,
ಮನದ ಶಂಕೆಯ ಕರಗಿಸು ... ಕರಗಿಸು ||-
ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು...
ಯಾವ ಬೃಂದಾವನವು ಸೆಳೆಯಿತು
ನಿನ್ನ ಮಣ್ಣಿನ ಕಣ್ಣನು!
(✍ಗೋಪಾಲಕೃಷ್ಣ ಅಡಿಗ)-