QUOTES ON #ನಲ್ಮೆಯೇ_ನಿನಗಾಗಿ

#ನಲ್ಮೆಯೇ_ನಿನಗಾಗಿ quotes

Trending | Latest
3 OCT 2019 AT 14:32

ಅವರು, ನನ್ನ ಕವಿತೆಯಲಿ ಬೆರೆತವನನು
ಒಮ್ಮೊಮ್ಮೆ ಗಾಜುಗಣ್ಣಲಿ ಹುಡುಕುವರು
ಯಾರವನು ಮೌನವ ಧ್ಯಾನಿಸಿದವನು..!
ಹೆಸರನ್ನಾದರೂ ತಿಳಿಸೆಂದು ಪೀಡಿಸುವರು
ರಂಗುಗಟ್ಟುವ ಕೆನ್ನೆಯ ಗುಟ್ಟನು ಕಟ್ಟಿಡಲು
ಬಿಳುಚುವ ತುಟಿಯಲಿ ನಗು ತೇಲುವಾಗ
ತಡವರಿಸಿದ ಹೃದಯ ಬಿಕ್ಕಳಿಕೆಯಾಡುತ್ತದೆ
ಯೌವ್ವನವ ಆಳುವ ದೊರೆಯವನು ನನ್ನವ.,
ಚಿರತಾರುಣ್ಯದವನ ನೆನೆದ ಮನ ತೊದಲುತ್ತದೆ
ನಾಚಿಕೆಯ ನುಣುಪುಂಡ ಮೊಗ ಹುದುಗಲು
ಅವನೆದೆಯ ಕೊನೆ ಮೂಲೆಯ ನುಸಿಯುವಾಗ
ಬೋರಲು ಮಲಗಿದ ಕವಿತೆ ಎಚ್ಚರವಾಗುತ್ತದೆ.!

-


25 AUG 2019 AT 21:08

ಮಹಲ್ಲಿನ ಮೋಹವಿಲ್ಲ ಹುಡುಗ
ಹುಲ್ಲು ಜೋಪಡಿಯಿರಲಿ ಸಾಕು.!
ಸಣ್ಣಕ್ಕಿಯ ಸಿಹಿಯುಣಿಸೆಂದು ಕೇಳೆನು
ನೀನಿಟ್ಟ ನುಚ್ಚಕ್ಕಿಯ ತುತ್ತೆನಗೆ ಸಾಕು.,
ಹಾಸಿ ಹೊದಿಯಲು ನಿನ್ನೊಲವಿರಲು
ಹಂಗಿನಾಚೆಯ ಬಾಳ್ವೆ ನಮದಾಗಲು.,
ಸಿರಿತನ ಬದುಕಿನಿಂದಾಚೆ ಉಳಿಯಲಿ,
ಸಿರಿಪ್ರೇಮಕೆಂದು ಬಡತನ ಬಾರದಿರಲಿ.!

-


23 AUG 2019 AT 20:45

ಆತ್ಮ ನೀನು
ದೇಹ ನಾನು
ಒಂದಾಗಬೇಕು
ಒಲವೇ ಉಸಿರಾಗಬೇಕು
ನನಗೂ.,
ನನ್ನೊಳಗಿರುವ
ನಿನಗೂ..!

-


19 NOV 2019 AT 20:54

ಹನಿಗೂಡಿದ ಕಣ್ಣಾಲೆಯ
ಹೀಗೆ ನನ್ನತ್ತ ಹೊರಳಿಸಿ
ತುದಿಬೆರಳ ಸಾಂತ್ವನಕೆ
ಹಪಹಪಿಸದಿರು ಒಲವೇ.,
ಆ ಮರುಳು ದಿಣ್ಣೆಗೂ
ಈ ಹಸಿರ ಬೆಟ್ಟಕ್ಕೂ
ನಡುವಿರುವ ದೂರವ
ಕ್ರಮಿಸಲೆನಗೆ ತುಸು ಹೆಚ್ಚೇ
ಸಮಯ ಹಿಡಿಯಬಹುದು,
ನಿರಸನದಲ್ಲೇ ಕ್ಷಮಿಸಿಬಿಡು.!

-


9 JUN 2020 AT 13:11

ನಿನಗೆ ಬೇಸರಾದರೆ
ನನಗೂ ಬೇಡ ಬಿಡು ಹುಡುಗ;
ಸೂತಕದ ಸಂಕಟ,
ಭೇದಿಸದ ಬಂಧ ಬಂಧನ,

ದಾರಿಯಲಿ ನೀ ಚೆಲ್ಲಿದ
ನಗುವಿದೆ ಹೆಕ್ಕುತ್ತೇನೆ
ಎದೆ ಪೂರ್ತಿ ಹರವಿದ
ನೆನಪಿದೆ ಅಪ್ಪುತ್ತೇನೆ
ನಿನ್ನ ಸಾವಿರದ
ಸಾವೇ ಇರದ
ಕವಿತೆಯಿದೆ ಹೊಕ್ಕುತ್ತೇನೆ
ಸಾಕು.. ಹೊಟ್ಟೆ ತುಂಬುತ್ತದೆ
ಗೋರಿಯೊಳಗೂ ಬದುಕುತ್ತೇನೆ.!

-


12 MAY 2020 AT 21:08

ಕ್ಷಣಕೊಮ್ಮೆ ಸೋತಿರುವೆನು ನಾನು
ನಿನ್ನೊಲವ ವೇದಿಕೆಯಲಿ ವಾಚನಕೆ ನಿಂತು
ತೊದಲಿ ಮುಗ್ಗರಿಸಿ ಬಿದ್ದ ಹೊಸಗವಿತೆಯಂತೆ,
ಸೋತ ಪ್ರತಿ ಸರತಿಯೂ ಮುಗಿಲ ಹಾಳೆಗೆ
ನಿನ್ನ ನೆನೆಯುತ್ತಾ ಒಂದೊಂದು ಚುಕ್ಕಿಯಿಡುತ್ತಿದ್ದೆ
ಇಂದೂ ಅವೆಲ್ಲವೂ ತಾರೆಗಳಾಗಿವೆ ನೋಡು.!

-


12 JUL 2020 AT 11:06

ಬದುಕಿನ ಮೇಲೊಂದು
ಕಡು ಜಿಗುಪ್ಸೆ ಹುಟ್ಟಿದಾಗ
ಎದೆ ಕದವ ತಟ್ಟಿದವ ನೀನು,
ಅದಕ್ಕೇ ಏನೋ ಈಗಂತೂ
ಬದುಕೆಂದರೆ ನೀನು;
ನೀನೆಂದರೆ ಬದುಕು.!

-


7 APR 2020 AT 17:15

ಜಾಣ.. ನೀನಿಲ್ಲಿ ನಿಂತಾಲಿಸು,
ಜಗದ ಮೊದಲ ಪ್ರೇಮ ಅದ್ಯಾರೋ
ಅಡವಿಗೆ ಮೊದಲು ಬಂದವರದಂತೆ,
ಮೋಹಫಲವ ಮೊದಲುಂಡವರದಂತೆ
ಹಾಗಾದರೆ, ಧರೆಹುಟ್ಟಿ ಹರೆಯತೊಟ್ಟು
ಜವ್ವನದ ಮೆರಗು ಸೆರಗನುಟ್ಟಾಗ..
ಶ್ವೇತ ಹನಿಗಟ್ಟಿದ ಮೇಘಗಟ್ಟಿ ತಾನ್
ಹುರಿಮೀಸೆಯ ನವ ತರುಣನಾಗಿ,
ಚಿಗರಿಗಣ್ಣ ಚೆಲುವಿಯ ಕಂಡಂತೆ
ಹೆಗ್ಗಿರಿಯ ಶಿರಮುರಿದು ದಣಿದಂತೆ.,
ಭುವಿಯ ಮೊದಲ ಧೂಳ ಬೊಟ್ಟದನು
ತುಂತುರೆಂಬ ಬೆವರ ಹನಿ ಹನಿಸಿ
ನೆನೆಸಿದಾಗ, ಜನ್ಯವಾದ ಕಂಪಿನಲಿ
ಶೀತಾನು ತಂಪಿನಲಿ,ಆತ್ಮದಿಂಪಿನಲಿ..
ಇಳೆಮಳೆಯ ಪ್ರೇಮವಿರಲಿಲ್ಲವೇನು.,
ಮೊದಲುಗಳಿಗೆ ಮೊದಲದಲ್ಲವೇನು.!

-


9 JUN 2020 AT 11:40

ಅವಳಿಗೆ ಜೀವವೂ ಜೀವನವು ಅವನೇ ಆಗಿದ್ದನು,
ಅವನೋ ಜೀವದಿಂದ ಜೀವನವ ತೂಗಿ ಅಳೆದು
ಬದುಕು ದೊಡ್ಡದೆಂದು ಮೈಮನ ಕೊಡವಿ ನಡೆದನು!

-


31 MAR 2020 AT 13:26

ಬೆಳ್ಮುಗಿಲು ಹಿಂಜಿ ಹಗುರಾಗುವುದರಲ್ಲೇ.,
ಮತ್ತೆ ಕರಿಗಪ್ಪು ಭುವಿಯ ಮುಚ್ಚುತ್ತದೆ.,
ಸಿಡಿಲು ಗುಡುಗುಗಳ ಸುಳಿವೇ ಇರದೆ
ಒಮ್ಮಿಂದೊಮ್ಮೆಲೆ ಅವಳೆದೆ ನಿಂತಲ್ಲೇ
ಬಿರುಕು ಬಿಡುತ್ತದೆ.!

-