ಕರೆಯದೆ ಒಳಬಂದೆಯಾ.!
ತುಸು ತಾಳ್ಮೆಯಲಿ ಕಣ್ಣರಳಿಸು
ಗೋಡೆ ಮೇಲೆ ನೀ ಭಿಕ್ಷೆಯಿಟ್ಟ
ಮೊದಲ ಪ್ರೇಮದ ಕವಿತೆಯಿದೆ,
ನಿಲುವುಗನ್ನಡಿಯ ಮುಟ್ಟದಿರು
ಕಪ್ಪಿನಲಿ ಕೊರೆದ ಶಾಯರಿಯಿದೆ.,
ಕಣ್ಣೀರು ಸೋಕಿದರೆ ಅಳಿಸೀತು.!
ಕಾಡಿಗೆಯ ಮಸಿ ನಿನ್ನ ಕೈಗಂಟೀತು,
ಇಲ್ಲಿಂದ ಹೊರಟುಬಿಡು ಗಾಲೀಬ್.!-
ಕಳಚಿದ ಗೆಜ್ಜೆಗಳು ಮಾತಿಗಿಳಿದಿವೆ
ನಿನ್ನ ಶಾಯರಿಯ ತುಣುಕಿನೊಡನೆ.!
ಮರಣ ಇನ್ನೇನು ಮೆಟ್ಟಿಲ ಮೆಟ್ಟಿದೆ,
ಪ್ರೀತಿಗೆ ಅದೆಲ್ಲಿಯ ಸಾವು ಗಾಲೀಬ್
ಸಾವು ಆ ಹುಳಿ ಹೆಂಡದ ಅಮಲಿಗಷ್ಟೆ.!-
ನೀನೇನೋ ಕವಿತೆ
ನೆನಪಾದಾಗೆಲ್ಲ, ನನ್ನ
ಸೆರಗಿಗೆ ಗಂಟು ಬಿಗಿದು
ನಿರಮ್ಮಳನಾಗುವೆ
ಅಲ್ಲವೇ ಗಾಲೀಬ್.!
ನಾನೋ ಬಿರಿದಿಟ್ಟ
ಗಂಟು ಬಿಚ್ಚಿ, ಶಾಹಿ
ಹಾಳೆ ಸೇರುವ
ಬರಗೆಟ್ಟ ನಾಳೆಗಾಗಿ
ಉಸಿರುಗಟ್ಟಿ ಕಾಯುವೆ.!-
ಪ್ರೇಮದ ಅಸಲಿ ಸುಖ ಸನಿಹ
ಮತ್ತು ಚುಂಬನಗಳಲಿಲ್ಲ ಗಾಲೀಬ್,
ದೊರೆಯದ ಸಾನಿಧ್ಯವ ಬೇಡುತಾ
ಹರಿವ ಕಣ್ಣೀರ ಆಹ್ಲಾದಿಸುವುದೇ
ಪ್ರೇಮದ ಪರಮೋಚ್ಛ ಸುಖ.!-
ಮಧುಬಟ್ಟಲ ಇತ್ತ ಹಿಡಿಯೆಂದರೆ
ನಿನ್ನತ್ತ ಸೆಳೆದೆನ್ನ ಕಣ್ಣೊಳಗೆ ಕಣ್ಣಿತ್ತು
ಪಾನಬಟ್ಟಲು ತುಂಬಿದೆಯಲ್ಲ ಸಾಕಿ,
ನಿನ್ನ ಬಟ್ಟಲುಗಣ್ಣಲಿದೆ ನನ್ನ ಶರಾಬು
ಎಂದು ಮತ್ತಿನಿಂದರುಹಿದರೆ ಗಾಲೀಬ್.!
ನಿನ್ನ ನಾ ಕುಡುಕನೆನಲೆ.! ಕವಿಯೆನಲೆ.!-
ಚೈತ್ರದ ಚಿಗುರಿಗೂ ವಯಸ್ಸು ಮಾಗಿದೆ
ಹಸಿರೆಲ್ಲವೂ ಕೊರಡು ಕಂದಾಗಿ ಬದಲಿ,
ಕಾಲದ ಗಮ್ಮತ್ತು ಇದೇ ಅಲ್ಲವೇ ಗಾಲೀಬ್
ಅಕ್ಷರಾರಾಧಕ ಮಧ್ಯದ ಸೇವಕನಾದಂತೆ.!-
ನಿನ್ನೆದೆನೆಲವ ಪೂರ್ತಿಯಾಗಿ
ಒಣಗಿಸಿ ನಡೆಯದಿರು ಗಾಲೀಬ್,
ನಿನ್ನಾಕೆಯ ಸುಡು ಅಂಗಾಲ್ಗಳ
ತಂಪಿರಿಸುವಷ್ಟು ತೇವವನಾದರು
ಉಳಿಸಿಡು., ತಿರುಗಿ ಬಂದಾಳು.!-