ರುಬಾಯಿ೪೧
ಪರಿಶ್ರಮವು ಅಗತ್ಯ ಕಲಿವಾಗ
ಚಳಕಕ್ಕೆ ಮಹತ್ವ ಮಾಡುವಾಗ
ಹೊಂದಲು ಪರಿಪೂರ್ಣ ಪರಿಣತಿ
ಖಚಿತವು ಪಡೆಯುವುದು ಯಶವಾಗ-
ರುಬಾಯಿ ೪೦
ಪಕ್ಷಪಾತದ ಸುನಾಮಿಯು ಅಪ್ಪಳಿಸುತಿದೆ
ಸ್ವಜನ ಪ್ರೇಮ ಅತಿಯಾಗಿ ವಿಜೃಂಭಿಸುತಿದೆ
ಆತ್ಮೀಯರಿಗೆ ಸಲ್ಲದ ಅತಿಶಯ ತೋರುತಲಿ
ನಿಜ ಪ್ರತಿಭೆಗಳ ಕಮರಿಸಿ ಮುಳುಗಿಸುತಿದೆ-
ರುಬಾಯಿ ೩೬
ತೊಲಗುವುದು ಅಸಹನೆಯ ಅಂಧಕಾರ
ಬೆಳೆಯುವುದು ಸಹಿಷ್ಣುತೆಯ ಮಮಕಾರ
ಸಹಕಾರದ ಮನೋಭಾವ ತೋರಿಸಲು
ನಿನ್ನಿಂದಾಗುವುದು ಮನುಕುಲಕ್ಕೆ ಉಪಕಾರ-
ರುಬಾಯಿ ೩೫
ಸುಲಲಿತವದು ಸಂಬಂಧಗಳ ನಿಭಾವಣೆಗಳು
ಸುಲಭವಾಗುವುದು ಕರ್ತವ್ಯ ನಿರ್ವಹಣೆಗಳು
ಸಂಭಾಷಣೆಯ ಕಲೆಯನು ಅರಿತಿರಲು ಸದಾ
ಕಾಡಿಸದು ಭಿನ್ನಾಭಿಪ್ರಾಯದ ಚಿತಾವಣೆಗಳು-
ರುಬಾಯಿ_ 6
ತೊಲಗಲಿ ಮನದಿಂದ ಕೆಟ್ಟ ಆಲೋಚನೆ
ಆಗಲಿ ಸ್ವಾರ್ಥ ಅಹಂಗಳಿಗೆ ವಿಮೋಚನೆ
ನವ ಚಿಂತನೆಯ ಹೊಂಬೆಳಕು ಹರಡಿ
ತುಂಬಿರಲಿ ಸಹಕಾರ ಸಂತೃಪ್ತಿಯ ವಿವೇಚನೆ-
ತಂದೀತು ಎಂಬ ಚಿಕ್ಕ ಬಯಕೆ
ಹನಿಸಿ ನೆಮ್ಮದಿಯ ಎದೆ ಹೊಲಕೆ
ತಂಪಾಗಿಸಿ ಬರಡು ಮನವನು
ಸಜ್ಜಾಗಿಸುತ ಹೊಸ ಸಂಕ್ರಮಣಕೆ
-
ರುಬಾಯಿ ೩೯
ಅಧಿಕಾರದ ದರ್ಪದಲ್ಲಿ ಬೀಗುವವಗೆ
ಅಹಂಕಾರದ ಹೊಳೆಯಲ್ಲಿ ಈಜುವವಗೆ
ಅವನತಿಯು ಕಟ್ಟಿಟ್ಟ ಬುತ್ತಿಯೇ
ಅಪಮಾನ ಪರರಿಗೆ ಮಾಡುತ ಮೆರೆವವಗೆ-
ರುಬಾಯಿ
ಬಾಳ ಸಾಗರವನು ದಾಟಲು ಇಲ್ಲ ಪ್ರಯಾಸ
ಜೀವನಪಯಣದ ದಾರಿ ಸುಗಮ ಅನಾಯಾಸ
ನಿಜವಾದ ಸ್ನೇಹಿತರು ಸದಾ ಜೊತೆಗಿದ್ದರೆ
ಕಾಣಬಹುದು ಬದುಕಿನಲ್ಲಿ ಎಂದೂ ಸಂತಸ
-
ಅನುಮತಿ*
ಮನಕಿರಲಿ ಪರಚಿಂತನೆಯ ತಿಳಿವು
ಸಹಕಾರದ ಸಾಮರಸ್ಯಕಿದೆ ಉಳಿವು
ಆಗದಿರಲಿ ಆತ್ಮವಿಕಾಸದ ಅಳಿವು
ಅನುಮತಿಸಿ ನೀಡುತಿರೆನಗೆ ಸುಳಿವು-
ರುಬಾಯಿ 2
ಜೀವನವಾಗಿದೆ ಇಂದು ಪೂರಾ ವ್ಯತಿರಿಕ್ತ
ನಿರೀಕ್ಷೆ ಕನಸುಗಳಿಲ್ಲದ ಹಾದಿ ಬರೀ ರಿಕ್ತ
ಅದಕ್ಕೆ ಬೇಕೇಬೇಕಾಗಿದೆ ಈಗ ಏಕಾಂತ
ಆಗಬೇಕೆನಿಸಿ ಎಲ್ಲಾ ಚಿಂತೆಗಳಿಂದ ಮುಕ್ತ-