ವಿರಹದಿ ನೊಂದು ಕೊರಗಿ
ಪ್ರೀತಿ ಮೇಣವು ಕರಗಿ
ಬಾಡಿತು ಪ್ರೇಮದ ಹೂ ಸೊರಗಿ
ಬಂದು ಸೇರುವೆಯ ಎನ್ನ
ವಿರಹದುರಿ ತಾಳೆನು ಇನ್ನ
ನೀನಾಗು ನನ್ನ ಮಾಂಗಲ್ಯದ ಚಿನ್ನ-
|| ಆಹಾ ಉದ್ದು ||
.
-ಮುಂಗಡ ಕಾಯ್ದಿರಿಸಿದ ಟಿಕೆಟ್ಟಿನಂತೆ ಅವಳಿಗಾಗಿ ಮುಂಚೆಯೇ ನೆನೆಸಿಟ್ಟ ಉದ್ದಿನಬೇಳೆ, ನಾಲಿಗೆನ ಚುರುಕಾಗಿಸೋ ಜಜ್ಜಿದ ಕಾಳುಮೆಣಸು, ಗರಿಯ ಪದರಕ್ಕೆ ಅಕ್ಕಿಹಿಟ್ಟು, ಬಲು ಕಟುವಾದ ಮೆಣಸಿನಕಾಯಿ, ಅಲಂಕಾರಿತ ಘಮಗಳ ಕರಿಬೇವು ಕೊತ್ತಂಬರಿ, ಉಪ್ಪು ರುಚಿಗೆ ತಕ್ಕಷ್ಟು (ಸಾಂಪ್ರದಾಯಿಕ ಶೈಲಿಯಲ್ಲಿ😉), ಇದೆಲ್ಲದರ ಸಮ್ಮಿಶ್ರ ಸರ್ಕಾರವನ್ನ ಹದವಾಗಿ ಕಾಯಿಸಿದ ಎಣ್ಣೆಯಲ್ಲಿ ಇಳಿಬಿಡುವುದೇ ಚೆಂದ.
-ಅವಳು ಉಬ್ಬುವ ಪರಿಯಂತೂ ಅಬ್ಬಬ್ಬಾ., ಹುಣ್ಣಿಮೆ ಕಂಡಾಗ ಸಾಗರ ಉಕ್ಕುತ್ತದಲ್ಲಾ ಥೇಟ್ ಹಾಗೆಯೇ.. ಎಣ್ಣೆಯ ಕಡಲಲಿ ಉದ್ದಿನ ಹುಣ್ಣಿಮೆಯೋ ಇಲ್ಲ ಉದ್ದಿನ ಹುಣ್ಣಿಮೆಗಾಗಿ ಕಡಲಾದ ಎಣ್ಣೆಯೋ,, ಒಟ್ಟಿನಲ್ಲಿ ಇವಳು ಉಬ್ಬುವ ಪರಿಯನ್ನ ಕಂಡು ಚಂದ್ರನೂ ನಾಚುವನು, ಅದಂತೂ ಸತ್ಯ..
-ಇವಳೊಂತರಾ, ಆಗ ತಾನೆ ಗಂಜಿ ಹಾಕಿ ಇಸ್ತ್ರಿ ಮಾಡಿಟ್ಟ ಕಂದು ಬಣ್ಣದ ಗರಿ ಗರಿ ಕಾಟನ್ ಸೀರೆಯುಟ್ಟ ನಾರಿಯಂತೆ, ಮೇಲೆ ಗರಿಗರಿ ಮಿರಿಮಿಂಚು ಒಳಗೆ ಉದ್ದೆಂಬ ಮುದ್ದು..
- ಧರ್ಮಜನಂತೆ ಎಲ್ಲರೂ ತಂಪಾಗಿರಲಿ ಎಂದು ಹಾರೈಸುವ ಮೊಸರಾದರೂ ಸೈ, ಭೀಮನಂತೆ ಸದಾ ಕೋಪಾರುಣನಾದ ಸಾಂಬರ್ ಆದರೂ ಜೈ, ಇಲ್ಲ ಪಾರ್ಥನಂತೆ ಶಕ್ತಿಶಾಲಿಯಾದ ಚಟ್ನಿ ಆದರೂ ಸರಿ..ಇದ್ಯಾವುದೂ ಇಲ್ಲವೆಂದರೂ-- ಸದಾ ಪ್ರಸನ್ನಚಿತ್ತರಾದಂತ ನಕುಲ ಸಹದೇವ (ಒಂದೇ ಅಂಶದಿಂದ ಹುಟ್ಟಿದವರು ಒಂದೇ ಎಂಬಂತೆ)ರಂತೆ, ಇದನ್ನ ಹಾಗೆಯೇ ತಿಂದರೂ ಸರಿಯೇ...ಒಟ್ಟಿನಲಿ ಎಲ್ಲದಕೂ ಸಮಾನ ರುಚಿ, ಸಮಾನ ಭಾವ ಕೊಡುವ ಇವಳನು ಪಾಕಲೋಕದ ಪಾಂಚಾಲಿ ಎಂದರೆ ತಪ್ಪಾಗಲಾರದು..
- ಡಯೆಟ್ ಹೆಸರೇಳಿ, ಎಣ್ಣೆ ಪದಾರ್ಥವೆಂಬ ಕಾರಣ ನೀಡಿ ಇವಳ ಜೊತೆ ಮಾತಿಗಿಳಿಯದವರು ಕಲಿಯುಗದ ಕಡುಪಾಪಿಗಳು...-
ನೆನಪುಗಳ ಅಂಗಡಿ ತೆರೆಯುವಾಸೆ
ಮನಸೆಂಬ ಮಲ್ಲಿಗೆ ಹೂವನು
ಮೃದುವಾಗಿ ನಿನ್ನ ಮುಡಿಗಿರಿಸುವಾಸೆ
ಬೈಯದಿರು ಚೆಲುವೇ,,
ಸಿಕ್ಕಾದ ಕೂದಲಲಿ ಮಲ್ಲಿಗೆಯಿರಿಸಿ
ನಿನ್ನ ತುಂಟ ಸೊಕ್ಕನು ಮುರಿದಿದ್ದಕ್ಕೆ-
ನಾಲ್ಕು ಹಂತದ ಜೀವನವಿದು
ನಾಲ್ವರಲೊಂದಾಗು
ನಾಲ್ಕು ಸಾಲಿನ ಉಪದೇಶ ಸಾಕು
ನಾಲ್ವರಿಗೊಳಿತಾಗು-
ತಪ್ಪು ಒಪ್ಪುಗಳ ನಡುವೆ
ಜೀವನ ಮುಪ್ಪಾದೀತು
ಒಪ್ಪದವರಿಗೆ ಒಪ್ಪಿಸುತಾ ಕುಳಿತರೆ
ಮನ ಕಪ್ಪಾದೀತು-
ನಿನ್ನ ಮಾಸದ ನೆನಪು
ಉಳಿದಿದೆ ಇದ್ದಿಲಿನಂತೆ
ಬಿಸಿಯಾಗಲು ಮನ ಸುಡುವುದು
ತಣ್ಣಗಾಗಲು ಪ್ರೇಮ ಮಸಿಯಾಗುವುದು
-
ಹೆಚ್ಚೇನೂ ಕೇಳುವುದಿಲ್ಲ
ಆಗಾಗ ನಿನ್ನ ಬೆರಳುಗಳಿಂದ
ರೇಖಾಗಣಿತದ ಪರಿಚಯ ಮಾಡಿಸಿಬಿಡು
ಅಷ್ಟು ಸಾಕು ಈ ಮುಂಜಾವುಗಳಿಗೆ-