ಹಗಲಲಿ ನಿದಿರೆ
ರಾತ್ರಿಗೆ ಎಚ್ಚರ
ನೀ ಹತ್ತಿರವಿರದೆ
ಮತ್ತದೇ ಬೇಸರ
-
ಹುಡುಗಿ...
ಅದೇನು ನಿನ್ನ ಕೆನ್ನೆಯ ಮೇಲಿರುವುದು
ಗುಳಿಯೋ..
ಇಲ್ಲಾ....
ನನ್ನ ಹೃದಯದೊಳು ಒಲವ ಕೆತ್ತುವ
ಉಳಿಯೋ..?-
ನಾನಿನ್ನೂ ಬೇರೆಬೇರೆ ಅರ್ಜಿಗಳ ಕಡೆ
ಕಣ್ಹಾಯಿಸುತ್ತಿದ್ದೆ
ನೀ ಅದ್ಯಾವಾಗಲೋ ಒಳಸೇರಿ
ಅರ್ಜಿ ಗುರಾಯಿಸಿ
ನನ್ನ ಸಹಿ ಫೋರ್ಜರಿ ಮಾಡಿ
ಹೃದಯವನ್ನ ಕದ್ದೊಯ್ದಿದ್ದೆ
ಈಗ
ಹೃದಯವೂ ಇಲ್ಲ
ನೀನೂ ಇಲ್ಲ
ಹೇಗೆ ಕಳೆಯಲಿ ನಾನು
ಈ ಏಕಾಂತವನ್ನು
ಹೇಗೆ ಕಳೆಯಲಿ ನಾನು
ಈ ಚಳಿಗಾಲವನ್ನು
-
ದೇವರ ಪ್ರಾರ್ಥನೆ:
"ಮುಟ್ಟಬೇಡ ಮಾನವ
ಮುಟ್ಟಿದರೆ ನೀ ದಾನವ
ತೀರ್ಥ ಪ್ರಸಾದಕೆ ಕಯ್ಯ ನೀಡಿ
ಹೋಗಬಹುದು ಸೋಂಕು ಹರಡಿ
ಕಂಡದೆಲ್ಲ ಮುಟ್ಟಿ ಮುಟ್ಟಿ
ಗಲ್ಲ ಹಣೆಗಳ ತಟ್ಟಿ ತಟ್ಟಿ
ಪಾಪ ಕಳೆವ ಭರದಲಿ
ಸೋಂಕು ಪಡೆವ ತೆರದಲಿ
ಮುಟ್ಟಬೇಡ ಮಾನವ
ಮುಟ್ಟಿದರೆ ನೀ ದಾನವ
ಬೇಡಿ ಬೇಡಿ ಬಯಸಿದ್ದೆಲ್ಲ
ಕಾಡಿ ಕಾಡಿ ದೈವವೆಲ್ಲ
ಪಡೆದುಕೊಂಡ ಪುಣ್ಯವೇನು?
ನೀ ಕಳೆದುಕೊಂಡ ಪಾಪವೇನು?
ಇರಲಿ ಇರಲಿ ಏನೆ ಇರಲಿ
ಬರಲಿ ಬರಲಿ ಏನೇ ಬರಲಿ
ಸದ್ಯಕಂತು ನೀನು...
ಮುಟ್ಟಬೇಡ ಮಾನವ
ಮುಟ್ಟಿದರೆ ನೀ ದಾನವ-
ವಿಧಿ
ಒಳ್ಳೆಯದೂ ಅಲ್ಲ
ಕೆಟ್ಟದ್ದೂ ಅಲ್ಲ
ಅದಕ್ಕೆ
ಸಂತೋಷದ ಸೋಂಕಿಲ್ಲ
ಅಳಲಿನ ಲೇಪವೂ ಇಲ್ಲ
ಅದಕ್ಕೆ
ಕನಿಕರವಿಲ್ಲ
ಕಟುಕತನವೂ ಅಲ್ಲ
ಅದಕ್ಕೆ
ಹೃದಯವಿಲ್ಲ
ತಲೆಯೂ ಇಲ್ಲ
ಅದು
ತಾ ಮಾತ್ರ
ತನ್ನ ಕಯ್ಯ ಕುಣಿಕೆ ಬೀಸಿ
ಕರೆದೊಯ್ವ
ಕಾಲಧರ್ಮ
-
ಯಾವುದೋ ಒಂದು ಸೆಳೆತವು ಎದೆಯ ಒಳಗೆ ಮೂಡಿದೆ
ಹೇಗೋ ಏನೋ ನೋಟವೊಂದು ಕಣ್ಣಮುಂದೆ ಬಂದಿದೆ
ಅಂಗಳದಲಿ ಹಂದರದ ಕಂಬ ಕಂಡು ಬಂದಿವೆ
ಬಾಳೆಗೊನೆ, ತೋರಣವು ಅಲ್ಲಿ ನೇತಾಡಿವೆ
ಮನೆಯಮಂದಿಯ ನಡುವೆ ಗಡಿಬಿಡಿ ತೂರಾಡಿದೆ
ಗಾಳಿಯಲ್ಲಿ ಸಡಗರದ ಸಂತಸ ಹರಿದಾಡಿದೆ
ಅಜ್ಜಿ ಉಟ್ಟ ಮಿರುಗು ಜರಿಯ ಪತ್ತಲವು ಮೆರೆದಾಡಿದೆ
ಜಳಕಕಾಗಿ ನೀರೋಲಿಯು ಬೆಚ್ಚನೀರು ಕಾದಿದೆ
ಒಳ್ಳು ಒನಕೆ ಪೂಜೆಗೊಂಡು ದೇವರಂತೆ ಬೀಗಿವೆ
ಮನೆಗೆ ಬಂದ ಮಂದಿ ಕಂಡು ದೇವರೇ ಬೆರಗಾಗಿವೆ
ಹಿತ್ತಲಲ್ಲಿ ಡೇರೆ ಹೂವು ಹೆಂಗಸರಿಗೆ ಕಳ್ಳ ನೋಟ ಬೀರಿದೆ
ಮುಂಬಾಗಿಲಿನ ಮಲ್ಲಿಗೆ ಬಂದವರ ಬರಮಾಡಿದೆ
ಮನೆಯ ಕಂಬ ತೊಲೆಗಳು ಎದೆಯುಬ್ಬಿ ನಿಂತಿವೆ
ನಗುವ ಸದ್ದಿನ ಅಲೆಯು ತಾಗಿ ಗೋಡೆಗೂ ಹಿತವಾಗಿದೆ
ವಾಲಗದ ನಾದಕೇಳಿ ಗುಡಿಯ ದೇವರು ಎದ್ದಿವೆ
ಊರ ಹೊರಗಿನ ಹನುಮನಿಗೆ ಕೊಂಚ ಬೇಜಾರಾಗಿದೆ
ದೇವಿ ಕೆಳಗಣ ಕೋಣವು ಏನು ಎಂದು ನೋಡಿದೆ
ಕರಿಗಡುಬಿನ ಎಡೆಯ ಕಂಡು ದೇವಿಯಣತಿ ಬೇಡಿದೆ
ನೀರು ತರುವವರು ದಾರಿಗುಂಟ ತಳಿ ಹೊಡೆದಾಗಿದೆ
ಮುಗಿಲು ತೆರವಾಗಿ ದೇವರಿಗೂ ನೋಡಲನುವಾಗಿದೆ
ಗೋಡೆಗೆ ತಾಗಿದ ಅತ್ತಿ ಮರವು ಬಾಗಿ ನಮ್ಮನು ಹರಸಿದೆ
ಅದರ ಬದಿಯ ಹೂಬನವು ಗಾಳಿಗೆ ಕಂಪ ಬೆರೆಸಿದೆ
ಏನೋ ಒಂದು ಸೆಳೆತವು ಎದೆಯ ಒಳಗೆ ಮೂಡಿದೆ
ಹೇಗೋ ಏನೋ ನೋಟವೊಂದು ಕಣ್ಣಮುಂದೆ ಬಂದಿದೆ-
ಹಾದಿಗುಂಟ
ದೀಪಸಾಲು
ಎರಡು ಕಣ್ಣು
ಸಾಲವು
ಬೆಳಗಿದರೆಶ್ಟೂ
ಸೋಲವು
ಆತ್ಮ ದೀಪ
ಒಳಗೆ ಇಹುದು
ನಮ್ಮ ಒಳಗೂ
ಬೆಳಗಲಿ
ಎಮ್ಮ ಬಾಳೂ
ತೊಳಗಲಿ
-
ಜಗವೇ ಕತ್ತಲೆಯಾಗಿರಲು
ಗುಡಿಯ ಬಾಗಿಲು
ಬೆಳಗಿದೆ
ಒಳಗಿನ ದೈವವ
ಕುರುಹಿದೆ
ಕಲ್ಲು ಹಂಸಕೆ
ಕಣ್ಣು ಬಂದಿದೆ
ತಾನು ತನ್ನನೆ
ಕಂಡಿದೆ
ತಾನು ತನ್ನನೆ
ಉಂಡಿದೆ
ಕಂಬ ಕಂಬಕು
ಮಯ್ಯ ಪುಳಕ
ಬೆಳಕ ಜಳಕ-
ವಾಗಿದೆ ಈಗ
ಎಲ್ಲ ಕಳೆಕಳೆ-
ಯಾಗಿದೆ
-
ನಿಲ್ಲದೆಯೇ ಓಡುವ
ಮೆಲ್ಲನೆಯೆ ಹಾಡುವ
ಎಲ್ಲರನು ನಗಿಸುವ
ಪೋರನೆ
ಹಿಡಿಯಲು ಕೊಸರುವ
ಮಡಿಲಲಿ ಮಲಗುವ
ನುಡಿಯಲು ತೊದಲುವ
ಚಿಣ್ಣನೆ
ಹೊಸಿಲಲಿ ಕೂರುವ
ಬಯಲಲಿ ನೋಡುವ
ಹಕ್ಕಿಯ ಕರೆಯುವ
ಮಾರನೆ
ಅಪ್ಪನನು ಏರುವ
ಅಮ್ಮನಲಿ ಜಾರುವ
ಅಜ್ಜಿಯ ಬಳಿ ಸುಳಿದಾಡುವ
ವೀರನೇ
-